ಬೆಂಗಳೂರು,ಮಾ,3,2020(www.justkannada.in): ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡಿದ್ದಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದ ಹಿರಿಯ ಸಾಹಿತಿ ದೇವನೂರು ಮಹದೇವ ಅವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಾಹಿತಿ ದೇವನೂರು ಮಹದೇವ್ ಪತ್ರಕ್ಕೆ ತಮ್ಮ ಫೇಸ್ ಬುಕ್ ನಲ್ಲಿ ಉತ್ತರ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮಹಾದೇವುರವರೇ ನಿಮ್ಮ ಪತ್ರದ ಭಾವನೆಗಳನ್ನು ನಾನು ಗೌರವಿಸುತ್ತೇನೆ. ದೊರೆಸ್ವಾಮಿರವರನ್ನು ದಶಕಗಳಿಂದ ನೋಡಿಕೊಂಡು ಬೆಳೆದಿದ್ದೇನೆ. ಆದರೆ ಅಂತಹ ಹಿರಿಯ ಸ್ಥಾನದ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಉಪಯೋಗಿಸುವ ಪದಗಳು ಬಹುಮುಖ್ಯ. ಸೈದ್ಧಾಂತಿಕವಾಗಿ ತಾವು ವಿರೋಧಿಸುವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ದೊರೆಸ್ವಾಮಿಯವರಿಗೆ ಸ್ವಾತಂತ್ರ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸುವ ಪರಿಭಾಷೆಯ ಕುರಿತು ಸ್ವಲ್ಪ ಅವರು ಗಮನ ಹರಿಸಬೇಕಿತ್ತು. ಮಾತಿನ ಮೇಲೆ ನಿಯಂತ್ರಣ ಎಲ್ಲರಿಗೂ ಬೇಕಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
“ಆಡಬಾರದ್ದನ್ನು ಕೇಳಬಾರದ್ದನ್ನು ಕೇಳಬೇಕಾಗುತ್ತದೆ” ಎಂದು ಹೇಳಿದ್ದು ಕೇವಲ ಓರ್ವ ವ್ಯಕ್ತಿಯ ಕುರಿತಲ್ಲ. ಬದಲಿಗೆ ಇಂದಿನ ವಾಸ್ತವ ಪರಿಸ್ಥಿತಿಯ ಕುರಿತು ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ಸುರೇಶ್ ಕುಮಾರ್ “ಆಡಬಾರದ್ದನ್ನು ಕೇಳಬಾರದ್ದನ್ನು ಕೇಳಬೇಕಾಗುತ್ತದೆ ಎಂದಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಚಿವ ಸುರೇಶ್ ಕುಮಾರ್ ಗೆ ಪತ್ರ ಬರೆದಿದ್ದ ಸಾಹಿತಿ ದೇವನೂರು ಮಹದೇವ ಅವರು, ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ? ಎಂದಿದ್ದರು.
Key words: Education Minister -Suresh Kumar – reply –writter-Devanoor Mahadeva-letter.