ಉಗರಲ್ಲೋಗೋದಕ್ಕೆ ಕೊಡ್ಲಿ ತಗಂಡ್ರ ಮಾನ್ಯ ಸಚಿವ ಸುರೇಶ್ ಕುಮಾರ್ ಅವರು…!

 

ಮೈಸೂರು, ಜ.11, 2019 : (www.justkannada.in news) : ವಿದ್ಯಾರ್ಥಿಯೊಬ್ಬ ‘ ಪಕ್ಕೆಲುಬು’ ಪದ ಉಚ್ಛಾರಣೆ ಸಂಬಂಧ ಶಿಕ್ಷಕರೊಬ್ಬರು ವಿಡಿಯೋ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಚಿವ ಸುರೇಶ್ ಕುಮಾರ್ ಅವರ ಕ್ರಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಚರ್ಚೆ ಆರಂಭವಾಗಿದೆ.
ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಕರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದು, ಅಮಾನತು ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಯ ಉಚ್ಛಾರಣೆ ಬಗೆಗಿನ ವಿಡಿಯೋ ಮಾಡಿ ಜಾಲತಾಣಕ್ಕೆ ಹಾಕಿದ್ದು ತಪ್ಪೇ ಇರಬಹುದು. ಆದರೆ ಅದಕ್ಕೆ ಅಮಾನತ್ತು ಮಾಡುವ ಅವಶ್ಯಕತೆ ಇತ್ತೆ..? ಎಂದು ನೆಟ್ಟಿಗರು ಸಚಿವರನ್ನು ಪ್ರಶ್ನಿಸುತ್ತಿದ್ದಾರೆ. ಕೆಲವರು ಸಚಿವರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಸಚಿವರು ಓವರಾಗಿಯೇ ರಿಯಾಕ್ಟ್ ಮಾಡಿದ್ರು ಎಂದು ಟೀಕಿಸಿದ್ದಾರೆ.

ಈ ಸಂಬಂಧ Nagesh Kalenahalli ಅವರ ಮುಖಪುಟದಲ್ಲಿನ ಬರಹ ಹೆಚ್ಚು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಅವರ ಮುಖಪುಟದಲ್ಲಿನ ಪೂರ್ಣ ಮಾಹಿತಿ ಹೀಗಿದೆ….
‘ ನಾನು ಶಾಲೆ ಕಲಿವಾಗ ಹೇಳಿದ ಕೆಲಸ (ಹೋಮ್ ವರ್ಕ್) ಮಾಡದಿದ್ದರೆ ಅಥವಾ ಮಗ್ಗಿ ತಪ್ಪಾಗಿ ಹೇಳಿದರೆ, ಲೆಕ್ಕ ತಪ್ಪಾದರೆ ‘ನೀನು ಎಮ್ಮೆ ಕಾಯೋಕೆ ಹೋಗು’, ಹಿಂಗೇ ಆದ್ರೆ ಹೊಲ ಉತ್ಕೊಂಡು ಇರ್ಬೇಕು ಅಷ್ಟೇ., ಎಂದೆಲ್ಲಾ ಗದರುತ್ತಿದ್ದರು. ಈಗಲೂ ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂಥವೇ ಮಾತುಗಳು ಕಾಮನ್. ಇದು ಒಂದು ವೃತ್ತಿ ಸೂಚಕ ಬೈಗುಳ.

ಅಂಗಿ ಕೊಳೆಯಾಗಿದ್ದರೆ, ಮೂಗು ಸೀಟಿಕೊಂಡ ಗೆರೆ ಕೆನ್ನೆಯವರೆಗೆ ರೈಟ್ ಆಕಾರದಲ್ಲಿ ಮಾರ್ಕ್ ಆಗಿದ್ದರೆ ‘ವಡ್ಡ’ ಎಂದು ಗದರುತ್ತಿದ್ದರು. ಈಗಲೂ ಇಂಥದೇ ಪರಿಸ್ಥಿತಿ ಇದ್ದೀತು. ಇದು ಜಾತಿ ಸೂಚಕ defamatory ಬೈಗುಳು.

ತೀರಾ ಸೆನ್ಸಿಟೀವ್ ಹುಡುಗನೊಬ್ಬ ಮಾಸ್ತರ ನಿಂದನೆಗೆ ಅತ್ತನೆಂದರೆ, ಅದ್ಯಾಕೋ ಒಳ್ಳೇ ಹುಡುಗೀರು/ಹೆಂಗಸರು ಅತ್ತಂಗೆ ಅಳ್ತೀಯ ಮಾತು ಮಾತಿಗೂ ಅಂತಾ ಸ್ವಾಟೆ ತಿವಿಯೋರು ಮಾಸ್ತರು. ಇದು ಲಿಂಗ ಬೇಧ ಮಾಡುವ ಬೈಗುಳ. Gender sensitivity ಇಲ್ಲದವರು ಬೈಯ್ಯುವ ಬೈಗುಳ. ಈಗಲೂ ನಮ್ಮ ಶಾಲೆಗಳಲ್ಲಿ ಇದು ತಪ್ಪಿಲ್ಲ ಅಂದುಕೊಂಡೀದ್ದೇನೆ.

ಕಾಲು ಊನ ಆಗಿದ್ದವನೋ/ಅವಳನ್ನೋ ಕುರಿತು ಮಾಸ್ತರು ಆ ಕುಂಟನ್ನ ಕರಿ ಆ ಕುಂಟಿನ ಬರೇಳು ಎಂದು ಹೇಳುತ್ತಿದ್ದರು. ಇದು physically challenged/specially abled ಮಕ್ಕಳಿಗೆ ತೋರುವ ತಾರತಮ್ಯ. ಅದು ಈಗಲೂ ಮುಂದುವರಿದಿರಲೇ ಬೇಕು.

ಕಪ್ಪು ಚರ್ಮದ ಹುಡುಗನನ್ನು ಕರಿಯ ಅಂತಲೂ ಕಪ್ಪು ಚರ್ಮದ ಹುಡುಗಿಯನ್ನು ಕರ್ಕಿ ಎಂದೂ ಕರೆಯುವ ಮಾಸ್ತರುಗಳಿದ್ದರು. ಈಗಲೂ ಇರುತ್ತಾರೆ.
ಮಾನ್ಯ ಸಚಿವರೇ, ಇಲ್ಲಿ ವಿಷಯ ಇಷ್ಟೇ,

‘ಪಕ್ಕೆಲುಬು’ ಎಂಬ ಪದವನ್ನು ಉಚ್ಛಾರ ಮಾಡಲಾಗದ ಪುಟ್ಟ ಹುಡುಗನೊಬ್ಬನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ ಮಾಸ್ತರನ್ನು ಅಮಾನತು ಮಾಡಿದ್ದೀರಿ. ನೀವು ಮಾಡಿರುವ ಕೆಲಸ ಸರಿಯೇ ತಪ್ಪೇ ಅಥವಾ over react ಮಾಡಿದ್ದೀರಾ !? ಆ ಪ್ರಶ್ನೆಗಳೆಲ್ಲಾ ಆಮೇಲೆ ಮಾತನಾಡೋಣ.
ಯೂ ಟೂಬ್ ನಲ್ಲಿ ಇಂಥ ಸಾವಿರಾರು ಮಕ್ಕಳ ವಿಡಿಯೋಗಳಿವೆ. ರಾಷ್ಟ್ರಗೀತೆ ಹಾಡಲು ಪ್ರಯತ್ನಿಸಿ ತೊದಲುವ ಮಕ್ಕಳು ಮತ್ತು ಅದನ್ನು ವಿಡಿಯೋ ಮಾಡಿ ಯೂ ಟೂಬ್ ಗೆ ಅಪ್ಲೋಡ್ ಮಾಡಿದವರನ್ನು ದೇಶ ದ್ರೋಹಿ ಎನ್ನುವಿರೇ !?

ಶಾಲೆಯ ಸಮಯದಲ್ಲಿ ಮೊಬೈಲ್ ಬಳಸಬಾರದೆಂಬ ಅಪವಾದ ಬೇರೆ ಆ ಶಿಕ್ಷಕನ ಮೇಲೆ ಹೊರಿಸಿದ್ದೀರಿ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಒಬ್ಬ ಸರ್ಕಾರಿ ನೌಕರ ಕೆಲಸದ ಮೇಲಿರುವಾಗ ಇಂತಿಷ್ಟು ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ಆತನ/ಅವಳ ಬಳಿ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವೂ ಇದೆ. ಮುಖ್ಯಮಂತ್ರಿಗಳಿಗೆ ಹೇಳಿ ಒಮ್ಮೆ ಎಲ್ಲಾ ಸರ್ಕಾರಿ ನೌಕರರನ್ನು ಕೆಲಸದ ಮೇಲಿರುವಾಗ ರೈಡ್ ಮಾಡಿಸಿ. ಪ್ರಾಯಶಃ ಎಲ್ಲರೂ ಸಸ್ಪೆಂಡ್ ಆಗಬಹುದು.

ನನ್ನ ಈ ಪತ್ರದ ಸಾರಾಂಶವಿಷ್ಟೇ. ‘ಪಕ್ಕೆಲುಬು’ ಪದ ಉಚ್ಚಾರಣೆಯ ವಿಡಿಯೋ ಮಾಡಿದ್ದನ್ನು ನಾನು ಸಮರ್ಥಿಸುತ್ತಿಲ್ಲ. ಅದೊಂದು ಯಡವಟ್ಟು. ತಮಾಷೆ. ಮನುಷ್ಯ ಸಹಜ ಚೇಷ್ಟೆ. ಅಷ್ಟೇ.

ಕರೆದು ಬುದ್ದಿ ಹೇಳಿ. ಆ ಮಾಸ್ತರನ್ನೇ ನೆಪವಾಗಿ ಇಟ್ಟುಕೊಂಡು ಇಡೀ ರಾಜ್ಯದ ಮಾಸ್ತರುಗಳಿಗೆ ಹೊಸ ಶತಮಾನದ do’s don’t’s ಕುರಿತಾಗಿ ಸೆನ್ಸಿಟೈಜ಼ೇಷನ್ ಕಾರ್ಯಕ್ರಮ ರೂಪಿಸಿ. ‘ವಡ್ಡ’ ಅನ್ನಬಾರದು, ‘ಕರಿಯ’ ಕರ್ಕಿ’ ಅನ್ನಬಾರದು, ‘ಕುಂಟ’ಕುಂಟಿ’ ಅನ್ನಬಾರದು. ಓದದೇ ಇದ್ರೆ ಎಮ್ಮೆ ಕಾಯ್ಬೇಕಾಗುತ್ತೆ ಅನ್ನಬಾರದು ಎಂದೆಲ್ಲಾ ಹೇಳಿಕೊಡಿ.

ಕಡೆಯದಾಗಿ ಒಂದು ಮಾತು:
ಕೆಲವು ವರ್ಷಗಳ ಹಿಂದೆ ಗುಲ್ಬರ್ಗಾದ ಕೆ. ಗೋವಿಂದಾಚಾರ್ಯ ಭಾರತೀಯ ಸ್ವಾಭಿಮಾನಿ ಆಂದೋಲನ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವೈದ್ಯರಾಗಿ, ಇಂಜಿನಿಯರ್ ಗಳಾಗಿ, ವಿಜ್ಞಾನಿಗಳಾಗಿ, ಆರ್ಥಿಕ ತಜ್ಞರಾಗಿ, ಉದ್ದಿಮೆದಾರರಾಗಿ, ಪೌರಸೇವ ಅಧಿಕಾರಿಗಳಾಗಿ ಎಂದೆಲ್ಲಾ ಉತ್ತೇಜಕ ನುಡಿಗಳನ್ನಾಡುತ್ತಿದ್ದರು. ಅವರ ಭಾಷಣ ಮುಗಿದ ಮೇಲೆ ಒಬ್ಬ ವಿದ್ಯಾರ್ಥಿ ಎದ್ದು ನಿಂತು ಕಲಾಂ ಸಾಹೇಬರೇ ನೀವೇಕೆ ನಮಗೆ ರೈತರಾಗಿ ಎಂದು ಹೇಳಲಿಲ್ಲ ಎಂದು ಪ್ರಶ್ನಿಸಿದ.

ಆ ಪ್ರಶ್ನೆಗೆ ಕಲಾಂ ಸಾಹೇಬರು ಸುದೀರ್ಘ ಉತ್ತರ ಕೊಡಲು ಪ್ರಯತ್ನಿಸಿದರಾದರೂ ಕಲಾಂ ಕುಸಿದು ಬಿದ್ದಂತಾಗಿದ್ದರು. ಆ ಹುಡುಗ ಕಲಾಂ ಅವರ ಸಂವಾದವನ್ನು ಠುಸ್ ಮಾಡಿದ್ದಲ್ಲದೆ ಸಮಾಜದಲ್ಲಿ ಕೃಷಿಯ ಬಗೆಗಿನ ದಿವ್ಯ ನಿರ್ಲಕ್ಷ್ಯ ಮತ್ತು ತಾತ್ಸಾರದ ಬಗ್ಗೆ ಬೆಳಕು ಚೆಲ್ಲಿದ್ದ. ( ನೆಲದ ಸತ್ಯ ಪುಸ್ತಕದಲ್ಲಿ ವಿನಾಶದತ್ತ ರೈತ ಸಮುದಾಯ ಲೇಖನದಿಂದ. ಪುಟ ೨೭, ಈ ಪುಸ್ತಕ ನಿಮ್ಮ ಕಲೆಕ್ಷನ್ ನಲ್ಲಿದೆ.)

ಮಾನ್ಯ ಸಚಿವರೇ, ಕಲಾಂ ರಿಗೆ ಪ್ರಶ್ನೆ ಕೇಳುವಂಥ ಹುಡುಗರನ್ನೂ ಸರ್ಕಾರಿ ಶಾಲೆಯ ಮಾಸ್ತರುಗಳೇ ರೂಪಿಸಿದ್ದು.

“ಪಕ್ಕೆಲುಬು” ಉಚ್ಚಾರದ ವಿಡಿಯೋ ಮಾಡಿದ ಶಿಕ್ಷಕನನ್ನು ಅಮಾನತು ಮಾಡುವ ಮುಖೇನ ಉಗರಲ್ಲಿ ಹೋಗೋದಕ್ಕೆ ಕೊಡ್ಲಿ ತಕಂಡ್ರು ಎನ್ನುವಂತಾಗಿದೆ.

key words : education.minister-sureshkumar-teacher-video-suspended-karnataka-bellary