ಬೆಂಗಳೂರು, ನವೆಂಬರ್ 8, 2022 (www.justkannada.in): ಕರ್ನಾಟಕದಲ್ಲಿರುವ 943 ಸರ್ಕಾರಿ, 10 ಅನುದಾನಿತ ಹಾಗೂ 48 ಖಾಸಗಿ ಶಾಲೆಗಳು ಸೇರಿದಂತೆ ಸುಮಾರು ೧,೦೦೧ ಶಾಲೆಗಳಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳಿಲ್ಲ. ಒಟ್ಟು ೭೫,೯೧೯ ಬಾಲಕಿಯರ ಶಾಲೆಗಳ ಪೈಕಿ ೧,೫೭೦ ಶಾಲೆಗಳಲ್ಲಿ ಬಳಕೆಯ ಸ್ಥಿತಿಯಲ್ಲಿ ಇಲ್ಲದಿರುವಂತಹ ಶೌಚಾಲಯಗಳಿದ್ದರೆ; ೩೨೮ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಮೇಲ್ಕಂಡ ದತ್ತಾಂಶವನ್ನು ಇತ್ತೀಚಿನ ಎಜುಕೇಷನ್ ಪ್ಲಸ್ ಗಾಗಿ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್‌ಫರ್ಮೇಷನ್ ಸಿಸ್ಟಂ (ಯುಡಿಐಎಸ್‌ಎ+) 2021-22ರ ಒಂದು ವರದಿ ಬಹಿರಂಗಪಡಿಸಿದ್ದು, ಈ ಮೂಲಕ ಕರ್ನಾಟಕದ ಶಾಲೆಗಳಲ್ಲಿರುವ ಕಳಪೆ ಮೂಲಸೌಕರ್ಯ ಹಾಗೂ ಕೊರತೆಯ ಮೇಲೆ ಬೆಳಕು ಚೆಲ್ಲಿದೆ.
ವರದಿಯ ಪ್ರಕಾರ ೭೧೪ ಶಾಲೆಗಳಲ್ಲಿ ವಿದ್ಯುತ್ ಇಲ್ಲ ಹಾಗೂ ೨೨೦ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ೮,೧೫೩ ಶಾಲೆಗಳಲ್ಲಿ ಕೈ ತೊಳೆಯುವ ಸೌಕರ್ಯಗಳಿಲ್ಲವಂತೆ.
ಅಂದಾಜು ೨೨,೬೧೬ ಶಾಲೆಗಳಲ್ಲಿ ವಿಶೇಷ ಅಗತ್ಯಗಳಿರುವಂತಹ ಮಕ್ಕಳಿಗಾಗಿ ರ್ಯಾಂಪ್ ಗಳಿಲ್ಲ. ಹಾಗಾಗಿ, ಅನೇಕ ಶೈಕ್ಷಣಿಕ ಸಂಸ್ಥೆಗಳು ಇನ್ನೂ ಸೇರ್ಪಡೆಗೊಳ್ಳುವುದರಿಂದ ಬಹಳ ದೂರವೇ ಉಳಿದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಸುಮಾರು ೧೨,೪೪೨ ಶಾಲೆಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ತಪಾಸಣೆಗಳನ್ನು ನಡೆಸಿಲ್ಲ.
ಈ ವರದಿಯನ್ನು ಸಾರ್ವಜನಿಕಗೊಳಿಸಿದಾಗಿನಿಂದ, ರಾಜ್ಯದಲ್ಲಿರುವ ಶಿಕ್ಷಣದ ಸ್ಥಿತಿಗತಿಯ ಕುರಿತು ಅನೇಕ ತಜ್ಞರು ಹಾಗೂ ಕಾರ್ಯಕರ್ತರು ಕಾಳಜಿಗಳನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಗಳ ಸಹಕಾರ ನಿರ್ವಹಣಾ ಮಂಡಳಿಗಳ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಮಾಧ್ಯಮಕ್ಕೆ ತಿಳಿಸಿದ ಪ್ರಕಾರ ವಾಸ್ತವದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುವುದಾಗಿ ತಿಳಿಸಿದರು.
“ನಿಜ ಹೇಳಬೇಕಾದರೆ, ಇದು ಕೇವಲ ಒಂದು ವರದಿ ಮಾತ್ರ. ಆದರೆ, ವರದಿಯೇ ಶಾಲೆಗಳು ಈ ಸ್ಥಿತಿಯಲ್ಲಿವೆ ಎಂದು ಸೂಚಿಸುತ್ತಿದ್ದರೆ ವಾಸ್ತವವನ್ನು ಊಹಿಸಿಕೊಳ್ಳಿ. ಶಾಲೆಗಳಲ್ಲಿನ ಈ ಮೂಲಸೌಕರ್ಯ ದುಸ್ಥಿತಿಗಳು ಬಹಳ ದೀರ್ಘ ಸಮಯದಿಂದಲೂ ಹೀಗೇ ಇದೆ. ಇದು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗಾಗಿ ನಮಗೆ ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿ,” ಎಂದರು.
“ದುರಾದೃಷ್ಟವಶಾತ್, ಸರ್ಕಾರ ತನ್ನ ಜವಾಬ್ದಾರಿಯ ವಿಷಯ ಬಂದಾಗ ಇಬ್ಬಗೆ ನೀತಿಯನ್ನು ತೋರಿಸುತ್ತದೆ. ಇದು ತನ್ನ ಜವಾಬ್ದಾರಿಯಾಗಿದ್ದರೂ ಸಹ ಸರ್ಕರ ಈ ಕಡೆ ಗಮನ ಹರಿಸುತ್ತಿಲ್ಲ. ಆದರೆ ಖಾಸಗಿ ಶಾಲೆಗಳಿಂದ ಮಾತ್ರ ಇದನ್ನು ನಿರೀಕ್ಷಿಸುತ್ತದೆ. ಶಾಲೆಗಳಲ್ಲಿ ಅಗ್ನಿಶಾಮಕ ಸುರಕ್ಷತೆ ವ್ಯವಸ್ಥೆಗಳು, ಕನಿಷ್ಠ ಮೂಲಸೌಕರ್ಯ, ಮಕ್ಕಳಿಗೆ ಪುಸ್ತಕಗಳು ಹಾಗೂ ಸಮವಸ್ತ್ರ ಒದಗಿಸುವುದು, ಇತ್ಯಾದಿ ವಿಷಯಗಳು ಬಂದಾಗ, ಹಣಕಾಸಿನ ತೊಂದರೆಗಳಿಂದಾಗಿ ಈ ಶಾಲೆಗಳು ಈ ಪೈಕಿ ಎಲ್ಲಾ ಅಂಶಗಳಲ್ಲಿಯೂ ಕೊರತೆಯನ್ನು ಎದುರಿಸುತ್ತಿವೆ,” ಎಂದು ಕುಮಾರ್ ವಿವರಿಸಿದರು.
ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಹಿಂದಿನ ವರ್ಷ ೫೦,೩೧,೬೦೧ರಿಂದ ೨೦೨೧-೨೨ರಲ್ಲಿ ೫೪,೪೫,೯೮೯ಕ್ಕೆ ತಲುಪಿದೆ. ವಿದ್ಯಾರ್ಥಿಗಳ ಸಂಖ್ಯೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಾದರೂ ಸಹ ಈಗಲೂ ಈ ಶಾಲೆಗಳಲ್ಲಿ ಸಮರ್ಥವಾದ ಸೌಲಭ್ಯಗಳಿಲ್ಲ.
“ಶಾಲೆಗಳಲ್ಲಿ ಪ್ರವೇಶಾತಿ ಪ್ರಮಾಣ ಹೆಚ್ಚಾಗಿರುವುದು ಉತ್ತಮ ವಿಷಯ. ಆದರೆ ಈ ಮಕ್ಕಳ ಸಂಖ್ಯೆಯನ್ನು ಇದೇ ರೀತಿ ಉಳಿಸಿಕೊಳ್ಳುವುದು ಮುಖ್ಯ. ಆದರೆ ಈ ರೀತಿಯ ಕಳಪೆ ಮೂಲಸೌಕರ್ಯ ಹಾಗೂ ಇತರೆ ಸೌಲಭ್ಯಗಳೊಂದಿಗೆ ಇದು ಕಷ್ಟಸಾಧ್ಯವೇ ಸರಿ. ಈ ಶಾಲೆಗಳು ವಿಶೇಷಚೇತನಸ್ನೇಹಿಯೂ ಆಗಿಲ್ಲ, ರ್ಯಾಂಪ್ ಗಳೂ ಇಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ವಿಶೇಷಚೇತನ ಮಕ್ಕಳು ಶಾಲೆಗೇ ಹೋಗುತ್ತಿಲ್ಲ,” ಎನ್ನುತ್ತಾರೆ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕರಾದ ನಾಗಸಿಂಹ ಜಿ. ರಾವ್ ಅವರು.
ಈ ಶಾಲೆಗಳಲ್ಲಿ ಪ್ರವೇಶಾತಿ ಪಡೆದಂತಹ ಮಕ್ಕಳ ಪೈಕಿ ಎಷ್ಟು ಮಕ್ಕಳು ಆ ಶಾಲೆಗಳಲ್ಲಿ ಶಿಕ್ಷಣವನ್ನು ಮುಂದುವರೆಸಿದ್ದಾರೆ ಎಂದು ಅಂದಾಜಿಸಲು ಶೈಕ್ಷಣಿಕ ವರ್ಷದ ಅಂತ್ಯದಲ್ಲಿಯೂ ಸಹ ಇದೇ ರೀತಿ ಸಮೀಕ್ಷೆಯನ್ನು ಕೈಗೊಳ್ಳಬೇಕು ಎಂದು ರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಡುವೆ, ವಿದ್ಯಾರ್ಥಿ ಕಾರ್ಯಕರ್ತರು ಹಾಗೂ ಸಂಘ-ಸಂಸ್ಥೆಗಳು ರಾಜ್ಯದಲ್ಲಿರುವ ಶಾಲೆಗಳ ಕಳಪೆ ನಿರ್ವಹಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ಅಖಿಲ ಭಾರತ ಡೆಮೊಕ್ರಟಿಕ್ ವಿದ್ಯಾರ್ಥಿಗಳ ಸಂಘ (ಎಐಡಿಎಸ್‌ಓ)ನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರ ಪ್ರಕಾರ, ದೇಶದ ಭವಿಷ್ಯವನ್ನು ರೂಪಿಸುವಂತಹ ಶಾಲೆಗಳ ಸ್ಥಿತಗತಿಯ ಕುರಿತು ರಾಜ್ಯ ಸರ್ಕಾರ ಇಷ್ಟು ನಿರ್ಲಕ್ಷ್ಯವನ್ನು ಹೊಂದಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.
“ಸರ್ಕಾರಿ ಶಾಲೆಗಳ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಈ ಎಲ್ಲಾ ಅಗತ್ಯತೆಗಳನ್ನು ಈ ಕೂಡಲೇ ಪೂರೈಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ,” ಎಂದರು.
ವರದಿಯ ಪ್ರಕಾರ ಕರ್ನಾಟಕದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಮುಚ್ಚಲ್ಪಟ್ಟಂತಹ ಶಾಲೆಗಳ ಸಂಖ್ಯೆ ೫೦೦. ಶಿಕ್ಷಕರ ಸಂಖ್ಯೆ ೨೩,೦೦೦ದಷ್ಟು ಇಳಿಕೆಯಾಗಿದೆ. ಯುಡಿಐಎಸ್‌ಇ+ (UIDSE+) ವರದಿಯನ್ನು ಶಿಕ್ಷಣ ಸಚಿವಾಲಯ (ಎಂಓಇ) ಬಿಡುಗಡೆಗೊಳಿಸಿತು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Educational status – state- Schools – poor condition