ತುಮಕೂರು,ಜನವರಿ,22,2021(www.justkannada.in): ಸಹಕಾರ ಕ್ಷೇತ್ರವು ಹಳ್ಳಿ ಹಳ್ಳಿಗಳಿಗೆ ಮುಟ್ಟಬೇಕು ಹಾಗೂ ಸುಲಭವಾಗಿ ರೈತರಿಗೆ ಮತ್ತು ನಾಗರಿಕರಿಗೆ ಸಾಲ ದೊರೆಯಬೇಕು ಎಂಬ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಸಹಕಾರ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಪೈಲೆಟ್ ಯೋಜನೆಯಾಗಿ ತುಮಕೂರು ಜಿಲ್ಲೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ತುಮಕೂರಿನಲ್ಲಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ತುಮಕೂರು ಜಿಲ್ಲೆಯಲ್ಲಿ ಒಟ್ಟು 327 ಗ್ರಾಮ ಪಂಚಾಯಿತಿಗಳಲ್ಲಿ 234 ಪ್ಯಾಕ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 93 ಗ್ರಾಮ ಪಂಚಾಯಿತಿಗಳಲ್ಲಿ ಪ್ಯಾಕ್ಸ್ ಗಳನ್ನು ತೆರೆಯುತ್ತಿದ್ದು, ಪೈಲೆಟ್ ಯೋಜನೆಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇನ್ನು 7-8 ತಿಂಗಳಿನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭ;
ರಾಜ್ಯದಲ್ಲಿ ಒಟ್ಟು 6019 ಗ್ರಾಮ ಪಂಚಾಯಿತಿಗಳಿದ್ದು, 5400 ಗ್ರಾಮ ಪಂಚಾಯಿತಿಗಳಲ್ಲಿ ಪ್ಯಾಕ್ಸ್ ಗಳಿವೆ. ಉಳಿದ 619 ಗ್ರಾಮ ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಪ್ಯಾಕ್ಸ್ ಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಾಲ ನೀಡಿಕೆಯಲ್ಲಿ ಶೇಕಡಾ 82ರಷ್ಟು ಗುರಿ ಸಾಧನೆ
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15300 ಕೊಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಇಂದಿನವರೆಗೆ 19,33,985 (19 ಲಕ್ಷದ 33 ಸಾವಿರದ 985) ರೈತರಿಗೆ 12543.33 (12 ಸಾವಿರದ 543.33) ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಇದುವರೆಗೆ ಶೇಕಡಾ 82ರಷ್ಟು ಗುರಿ ಸಾಧನೆ ಮಾಡಿದ್ದು, ಫೆಬ್ರವರಿಯೊಳಗೆ ಶೇಕಡಾ 100 ಗುರಿ ಮುಟ್ಟಲು ತಯಾರಿ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಬಡವರ ಬಂಧು, ಸ್ತ್ರೀ ಶಕ್ತಿ ಕಾಯಕ, ಎಸ್ಸಿ ಎಸ್ಟಿ ಹಾಗೂ ಅಲ್ಪಾವಧಿ, ಮಧ್ಯಮಾವಧಿ ಸಾಲಗಳ ಅಡಿಯಲ್ಲಿ 15300 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಶೇಕಡಾ 82ರಷ್ಟು ಗುರಿ ಸಾಧಿಸಲಾಗಿದೆ. ಇದೇ ಫೆಬ್ರವರಿ ಮಾಸಾಂತ್ಯದೊಳಗೆ ನೂರಕ್ಕೆ ನೂರು ಗುರಿ ಸಾಧಿಸಲು ನಾನು ಪ್ರತಿ ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಸೂಚನೆ ನೀಡುತ್ತಿದ್ದೇನೆ. ಮಾರ್ಚ್ ಒಳಗೆ ಸಾಲ ನೀಡಿಕೆ ಗುರಿ ತಲುಪುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ನೂರಕ್ಕೆ ನೂರು ಅನುಷ್ಠಾನ
ತುಮಕೂರು ಡಿಸಿಸಿ ಬ್ಯಾಂಕ್ ವತಿಯಿಂದ ಬಡವರಬಂಧು ಯೋಜನೆಗಳಲ್ಲಿ 4300 ಜನರಿಗೆ ಸಾಲ ಕೊಡಲಾಗಿದೆ. ಎಸ್ಸಿಎಸ್ಟಿ ಸಾಲ ವಿಭಾಗದಲ್ಲೂ ಶೇಕಡಾ 100 ಗುರಿ ಸಾಧಿಸಲಾಗಿದೆ. ಸಾಲ ನೀಡಿಕೆಯ ಅನುಷ್ಠಾನ ನೂರಕ್ಕೆ ನೂರರಷ್ಟು ಆಗಿದ್ದು, ಸಾಲ ಮರುಪಾವತಿಯೂ ಉತ್ತಮವಾಗಿದೆ. ಇನ್ನು ಸರ್ಕಾರದಿಂದ ಬರಬೇಕಾದ ಬಾಕಿಯನ್ನು ನಾನು ಶೀಘ್ರದಲ್ಲಿ ಬರುವಂತೆ ಪರಿಹರಿಸುತ್ತೇನೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ತಾಂತ್ರಿಕ ತೊಡಕಿನಿಂದ ಕೆಲವೇ ಕೆಲವರಿಗೆ ಸಾಲ ಮನ್ನಾ ವಿಳಂಬ
ಸಾಲ ಮನ್ನಾ ಪ್ರಯೋಜನಗಳು ಎಲ್ಲ ಫಲಾನುಭವಿಗಳಿಗೆ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಿಂಚಣಿ, ತೆರಿಗೆ ಪಾವತಿದಾರರು ಹೀಗೆ ಕೆಲವು ತಾಂತ್ರಿಕ ತೊಡಕುಗಳಿಗೆ ಕೆಲವರಿಗೆ ಸಾಲಮನ್ನಾ ಆಗಿಲ್ಲ. ಸದ್ಯದಲ್ಲಿಯೇ ಸಮಸ್ಯೆಗಳು ಬಗೆಯರಿಯಲಿವೆ. ಉಳಿದಂತೆ ಬಹುತೇಕರಿಗೆ ಪ್ರಯೋಜನ ಲಭಿಸಿದೆ. ಸದ್ಯಕ್ಕಂತೂ ಸಾಲಮನ್ನಾ ಯೋಜನೆ ಸರ್ಕಾರದ ಮುಂದೆ ಇಲ್ಲ. ಈ ಹಿಂದಿರುವ ಸಾಲಮನ್ನಾ ಯೋಜನೆಯ ಅನುಷ್ಠಾನವನ್ನು ನಾವು ಮಾಡುತ್ತಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವರು ತಿಳಿಸಿದರು.
ತೀರಿಹೋದ ರೈತರ ಸಾಲ ಮನ್ನಾ; ತುಮಕೂರು ಡಿಸಿಸಿ ಬ್ಯಾಂಕ್ ಮಾದರಿ
ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಮಾದರಿ ಕ್ರಮವನ್ನು ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತೆಗೆದುಕೊಂಡಿದ್ದಾರೆ. 68082 ತೀರಿಹೋದ ರೈತರ ಸಾಲಮನ್ನಾ ಮಾಡುವ ಮೂಲಕ ಅವರಿಗೆ ಆರ್ಥಿಕ ಬಲ ತುಂಬಿದ್ದಾರೆ. ರಾಜ್ಯದಲ್ಲಿಯೇ ಇದು ಮಾದರಿಯಾಗಿದ್ದು, ಲಾಭಾಂಶದಲ್ಲಿರುವ ಡಿಸಿಸಿ ಬ್ಯಾಂಕ್ ಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಗುಲ್ಬರ್ಗ ಡಿಸಿಸಿ ಬ್ಯಾಂಕ್ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಕೆಲವು ಗೊಂದಲಗಳಿದ್ದು, ಇವುಗಳನ್ನು ಹೊರತುಪಡಿಸಿ ಉಳಿದ 19 ಡಿಸಿಸಿ ಬ್ಯಾಂಕ್ ಗಳಲ್ಲಿ ಇದರ ಅನುಷ್ಠಾನ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಸುಮಾರು 90 ಕೋಟಿ ರೂಪಾಯಿಯಷ್ಟು ಸಾಲವನ್ನು ಸರ್ಕಾರದ ಅನುಮತಿ ಇಲ್ಲದೆ ಕೊಡಲಾಗಿತ್ತು. ಅಲ್ಲದೆ, ಸುಮಾರು 280 ಕೋಟಿ ರೂಪಾಯಿಯಷ್ಟು ಸಾಲವನ್ನು ವಸೂಲಾತಿಯೂ ಮಾಡಿರಲಿಲ್ಲ. ಹೀಗಾಗಿ ಇದರ ಬಗ್ಗೆ ತನಿಖೆ ನಡೆಸಿ ಹಿಂದಿನ ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಶಸ್ವಿನಿ ಜಾರಿ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ;
ಯಶಸ್ವಿನಿ ಜಾರಿ ಬಗ್ಗೆ ಎಲ್ಲ ಕಡೆ ಮನವಿ ಮಾಡಲಾಗಿದೆ. ಸರ್ಕಾರ ಸಹ ಅದೇ ಪ್ರಯತ್ನದಲ್ಲಿದೆ. ಈಗಾಗಲೇ ಎರಡು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಆರೋಗ್ಯ ಇಲಾಖೆ ಜೊತೆ ಎರಡು ಸುತ್ತಿನ ಮಾತುಕತೆಗಳನ್ನು ಮಾಡಲಾಗಿದೆ. ಸದ್ಯದಲ್ಲೇ ಇನ್ನೊಂದು ಸಭೆ ಮಾಡಿ ಆರೋಗ್ಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಏಕರೂಪ ತಂತ್ರಾಂಶ ಅಳವಡಿಕೆ
ಪಾರದರ್ಶಕ ಆಡಳಿತ ಹಾಗೂ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಸಹಕಾರ ಇಲಾಖೆ ಅಡಿಯಲ್ಲಿ ಬರುವ ಅಪೆಕ್ಸ್, 21 ಡಿಸಿಸಿ ಬ್ಯಾಂಕ್ ಹಾಗೂ 5263 ಪ್ಯಾಕ್ಸ್ ಗಳಲ್ಲಿ ಏಕರೂಪ ಸಾಫ್ಟ್‌ವೇರ್ ಅಳವಡಿಸುವ ಚಿಂತನೆ ಇದ್ದು, ಈಗಾಗಲೇ ಎರಡು ಸುತ್ತಿನ ಸಭೆಗಳಾಗಿವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಆರ್ಥಿಕ ಸ್ಪಂದನ ಮೂಲಕ ಬಲ
ಕೋವಿಡ್ 19 ರ ಸಂದರ್ಭದಲ್ಲಿ ಯಾರಿಗೂ ಸಹ ಸಾಲ ಸಿಗದೆ ಸಮಸ್ಯೆಗಳಾಗಬಾರದು ಎಂದು ಆರ್ಥಿಕ ಸ್ಪಂದನ ಕಾರ್ಯಕ್ರದ ಮೂಲಕ 39,300 ಕೋಟಿ ರೂಪಾಯಿ ಸಾಲವನ್ನು ನೀಡಲು ಈಗಾಗಲೇ ಚಾಲನೆ ನೀಡಲಾಗಿದೆ. ಡಿಸಿಸಿ ಬ್ಯಾಂಕ್, ಅರ್ಬನ್ ಬ್ಯಾಂಕ್ , ಕ್ರೆಡಿಟ್ ಸೊಸೈಟಿ ಸೇರಿ ಎಲ್ಲ ಕಡೆ ಸಾಲವನ್ನು ನಿರಾಂತಂಕವಾಗಿ ಸಾಲ ನೀಡಲಾಗುತ್ತಿದೆ. ಇದರ ಸಮರ್ಪಕ ಅನುಷ್ಠಾನಕ್ಕಾಗಿ ನಾಲ್ಕು ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಪಾರದರ್ಶಕತೆಗಾಗಿ ಪ್ರತಿ ಎರಡು ಜಿಲ್ಲೆಗೊಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ 5 ಸಾವಿರ ಹುದ್ದೆಗಳ ನೇಮಕಕ್ಕೆ ಸೂಚನೆ;
ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು, ಎಲ್ಲರಿಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಎಲ್ಲ ಹಾಲು ಒಕ್ಕೂಟಗಳು, ಕ್ರೆಡಿಟ್ ಯೂನಿಯನ್ ಗಳು ಸೇರಿದಂತೆ ಸಹಕಾರ ಇಲಾಖೆಗಳ ಎಲ್ಲ ಸಂಘ ಸಂಸ್ಥೆಗಳಿಗೂ ಮನವಿ ಮಾಡಿದ್ದು, 5 ಸಾವಿರ ಹುದ್ದೆಗಳನ್ನು ಸೃಜಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ, ಸಂಸದರಾದ ಜಿ.ಎಸ್.ಬಸವರಾಜ್ ಉಪಸ್ಥಿತರಿದ್ದರು.
Key words: Effort –reaching- village – cooperatives-Minister -S T Somashekhar.