ಬೆಂಗಳೂರು,ಡಿಸೆಂಬರ್,29,2020(www.justkannada.in): ರಾಜ್ಯಕ್ಕೆ ಹೆಚ್ಚು ವೈದ್ಯರು ಅಗತ್ಯವಿರುವುದರಿಂದ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಶಿವಾಜಿನಗರದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಒಂದು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 600-700 ಕೋಟಿ ರೂ. ಬೇಕಾಗುತ್ತದೆ. ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ, ಜನರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡಬಹುದು. ಗುಜರಾತ್ ನಲ್ಲಿ ಈ ರೀತಿ ಪ್ರಯತ್ನ ನಡೆಯುತ್ತಿದ್ದು, ನಮ್ಮಲ್ಲೂ ಈ ಬಗೆಯ ಪ್ರಯತ್ನ ಮಾಡಲಾಗುವುದು ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯ ಇರಬೇಕು. ಆದರೆ ದೇಶದಲ್ಲಿ 10-12 ಸಾವಿರ ಜನರಿಗೆ ಒಬ್ಬ ವೈದ್ಯ ಇದ್ದಾರೆ. ಜನಸಂಖ್ಯೆಗನುಗುಣವಾಗಿ ವೈದ್ಯರು ಇರಬೇಕೆಂದರೆ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಆರು ವರ್ಷಗಳಲ್ಲಿ 157 ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿದ್ದಾರೆ. 22 ಏಮ್ಸ್ ಸಂಸ್ಥೆಗಳನ್ನು ನಿರ್ಮಿಸುತ್ತಿದ್ದು, ಪ್ರತಿ ರಾಜ್ಯದಲ್ಲೂ ಏಮ್ಸ್ ಸಂಸ್ಥೆ ನಿರ್ಮಿಸುವ ಗುರಿ ಕೇಂದ್ರ ಸರ್ಕಾರಕ್ಕಿದೆ ಎಂದರು.
ರಾಜ್ಯದಲ್ಲೂ ಏಮ್ಸ್ ಸಂಸ್ಥೆಯನ್ನು ತರಬೇಕು ಎಂಬ ಉದ್ದೇಶ ಇದೆ. ಏಮ್ಸ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಪ್ರಕ್ರಿಯೆ ಜಾರಿಯಲಿದ್ದು, ಶೀಘ್ರದಲ್ಲೇ ಏಮ್ಸ್ ಕೂಡ ರಾಜ್ಯಕ್ಕೆ ಸಿಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು 2002 ರಲ್ಲೇ ಆರೋಗ್ಯ ನೀತಿಯನ್ನು ತಂದಿದ್ದರು. ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯ ನೀತಿ ಜಾರಿ ಮಾಡಿದ್ದಾರೆ. ರಾಜ್ಯದಲ್ಲೀಗ ಹೊಸ ಆರೋಗ್ಯ ನೀತಿ ರೂಪಿಸಲಾಗುತ್ತಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಒಳಗೊಂಡ ನೀತಿ ತರಲಾಗುವುದು ಎಂದು ಮಾಹಿತಿ ನೀಡಿದರು.
ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ 150 ವೈದ್ಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ವೈದ್ಯಕೀಯ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಹಾಸಿಗೆ ಹೆಚ್ಚಳ, ವೈದ್ಯಕೀಯ ಕಾಲೇಜುಗಳಿಗೆ ಹಾಸ್ಟೆಲ್ ನಿರ್ಮಾಣ ಮೊದಲಾದ ಮೂಲಸೌಕರ್ಯ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಮೂವರ ಸಂಪರ್ಕಿತರ ಪತ್ತೆಗೆ ಕ್ರಮ
ಯು.ಕೆ.ಯಿಂದ ಬಂದವರ ಪೈಕಿ 26 ಮಂದಿಯ ಮಾದರಿಗಳನ್ನು ನಿಮ್ಹಾನ್ಸ್ ಗೆ ಕಳುಹಿಸಿದ್ದು, ಮೂವರಲ್ಲಿ ಹೊಸ ಪ್ರಭೇದದ ಕೊರೊನಾ ವೈರಸ್ ಪತ್ತೆಯಾಗಿದೆ. ಈ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಯುನೈಟೆಡ್ ಕಿಂಗ್ ಡಮ್ ನಿಂದ ದೇಶಕ್ಕೆ ಬಂದವರಲ್ಲಿ ಕೊರೊನಾ ಸೋಂಕಿಗೊಳಗಾದವರ ಕುರಿತು ಐಸಿಎಂಆರ್ ಮಾಹಿತಿ ಸಂಗ್ರಹಿಸುತ್ತಿದೆ. ಇದು ಏಕರೂಪದ ಮಾಹಿತಿ ಸಂಗ್ರಹವಾಗಿರುವುದರಿಂದ ಯಾವುದೇ ಗೊಂದಲ ಉಂಟಾಗುವುದಿಲ್ಲ. ಯು.ಕೆ.ಯಿಂದ ಬಂದವರಲ್ಲಿ ಹೆಚ್ಚಿನವರು ಸೋಂಕಿಗೊಳಗಾಗದಿರುವುದರಿಂದ ಯಾವುದೇ ಆತಂಕ ಇಲ್ಲ. ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅಂತಹವರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: Efforts – Medical Colleges – Private-Government –Partnership-minister –sudhakar