ಮೈಸೂರು,ಆಗಸ್ಟ್,19,2022(www.justkannada.in): ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದ ವಿಚಾರ ಸಂಬಂಧ ಪ್ರಕರಣ ಕುರಿತು ನ್ಯಾಯಾಂಗ ತನಿಖೆಗೆ ವಹಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಒತ್ತಾಯ ಮಾಡಿದ್ದಾರೆ.
ಮೈಸೂರಿನಲ್ಲಿ KPCC ಕಾರ್ಯಧ್ಯಕ್ಷ ಆರ್ ಧ್ರುವನಾರಾಯಣ, ಶಾಸಕರಾದ ಡಾ. ಯತಿಂದ್ರ, ಸಿದ್ಧರಾಮಯ್ಯ, ಅನಿಲ್ ಚಿಕ್ಕಮಾದು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಆರ್ ಧ್ರುವನಾರಾಯಣ್ , ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ. ಈ ರೀತಿಯ ಕೃತ್ಯವನ್ನ ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಈ ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಮೊಟ್ಟೆ ಎಸೆತ ಘಟನೆ ಸೈನಿಕರ ನಾಡಿನಲ್ಲಿ ಮಾಡಿದ ಹೇಡಿತನ. ಕೊಡಗಿನ ವೀರ ಸಂಸ್ಕೃತಿಗೆ ತಲೆ ತಗ್ಗಿಸುವ ಕೆಲಸ ಬಿಜೆಪಿಗರು ಮಾಡಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಹಾಕಲು ಬಿಜೆಪಿ ಗಲಭೆಗಳನ್ನ ಸೃಷ್ಟಿಸುತ್ತಿದ್ದಾರೆ. ಮನೆಗೊಬ್ಬ ಸೈನಿಕರಿರುವ ಕೊಡಗಿನಲ್ಲಿ ಮನೆಗೊಬ್ಬ ಪುಂಡರನ್ನ ಬಿಜೆಪಿ ಹುಟ್ಟುಹಾಕುತ್ತಿದೆ. ಆಗಸ್ಟ್ 26ರಂದು ಮಡಿಕೇರಿ ಚಲೋ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಇದು ಸರ್ಕಾರದ ಪ್ರಾಯೋಜಿತ ಘಟನೆ ಎಂದು ಆರ್. ದೃವನಾರಾಯಣ್ ಕಿಡಿಕಾರಿದರು.
ಇದು ಹೇಡಿಗಳ ಕೃತ್ಯ:ಇಂತಹ ಘಟನೆಗಳಿಂದ ಸಿದ್ದರಾಮಯ್ಯ ಹೆದರೋದಿಲ್ಲ- ಶಾಸಕ ಯತೀಂದ್ರ ಸಿದ್ಧರಾಮಯ್ಯ.
ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ ಗೆ ಮೊಟ್ಟೆ ಹೊಡೆದ ವಿಚಾರ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಯತಿಂದ್ರ ಸಿದ್ಧರಾಮಯ್ಯ, ಇದು ಹೇಡಿಗಳ ಕೃತ್ಯ. ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲ. ಬಿಜೆಪಿಗರು ಹಿಂಸಾಚಾರದ ಮೂಲಕ ಇಳಿದಿದ್ದಾರೆ. ಯಾರಲ್ಲಿ ಸೈದ್ದಾಂತಿಕವಾಗಿ ಗಟ್ಟಿತನ ಇಲ್ಲವೋ ಅಲ್ಲಿ ಹಿಂಸಾಚಾರ ವಾಗುತ್ತದೆ. ಬಿಜೆಪಿಗರು ಪಕ್ಷದವರಿಂದ ಹಿಂಸಾಚಾರ ಮಾಡಿಸುತ್ತಾರೆ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ಸಿಗಲು ಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ಹಾಗೆಯೇ ಇಂತಹ ಘಟನೆಗಳಿಂದ ಸಿದ್ದರಾಮಯ್ಯ ಹೆದರೋದಿಲ್ಲ. ಹೋರಾಟದ ಹಿನ್ನೆಲೆಯಿಂದ ಬಂದವರು ಇಂತಹ ಘಟನಗೆ ಎದುರೋದಿಲ್ಲ. ಸರ್ಕಾರದ ವೈಫಲ್ಯ ಮಾರೆಮಾಚಲು ಇಂತಹ ಕೆಲಸಕ್ಕೆ ಇಳಿದಿದ್ದಾರೆ ಎಂದು ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
Key words: egg-throwing- incident – judicial- investigation-R.Dhruvanarayan