ELECTION SPECIAL- 3 : ಮುಸ್ಲಿಮರ ಬಾಹುಳ್ಯವಿರುವ ‘ನರಸಿಂಹರಾಜ’ ಕ್ಷೇತ್ರದಲ್ಲಿ ಮುಸ್ಲಿಮೇತರರೇ ನಿರ್ಣಾಯಕ.

 

ಮೈಸೂರು :  ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ರಾಜಕೀಯ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ  ‘ ಜಸ್ಟ್ ಕನ್ನಡ ‘ ದಲ್ಲಿನ ಮಾಲಿಕೆಯ 3 ನೇ ಅಖಾಡ ‘ ನರಸಿಂಹರಾಜ ಕ್ಚೇತ್ರ’

ಮೈಸೂರು ಸಂಸ್ಥಾನವನ್ನು ಆಳಿದ ಮೂವರು ರಾಜರ ಹೆಸರನ್ನೇ ಹೊತ್ತಿರುವ ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಪ್ರಮುಖವಾಗಿದೆ.

ಸ್ವಾತಂತ್ಯ್ರಾನಂತರ ೧೯೫೨ರಲ್ಲಿ ನಡೆದ ಮೊದಲ ಚುನಾವಣೆಯಿಂದ ಮೈಸೂರು ನಗರ ಉತ್ತರ ಕ್ಷೇತ್ರಕ್ಕೆ ಸೇರಿದ್ದ ಈ ಭಾಗ ೧೯೬೭ರಲ್ಲಿ ಪ್ರತ್ಯೇಕಗೊಂಡು ನರಸಿಂಹರಾಜ ವಿಧಾನಸಭಾ ಕ್ಷೇತ್ರವಾಗಿ ಉದಯವಾಯಿತು.

ನರಸಿಂಹರಾಜ ಕ್ಷೇತ್ರದ ಆರಂಭದಿಂದ ಈ ದಿನದ ತನಕ, ಉಪ ಚುನಾವಣೆಗಳು ಸೇರಿ ಒಟ್ಟು ೧೨ ಚುನಾವಣೆ ನಡೆದಿದೆ. ಈ ಪೈಕಿ ೧೦ ಬಾರಿಯೂ ಒಂದೇ ಕುಟುಂಬ ಅಧಿಕಾರದ ಗದ್ದುಗೆ ಏರಿದೆ.

ಕಾಂಗ್ರೆಸ್‌ನಿಂದ ಮುಕ್ತರುನ್ನೀಸಾ ಬೇಗಂ ಹಾಗೂ ಬಿಜೆಪಿಯಿಂದ ಮಾರುತಿರಾವ್ ಪವಾರ್ ಬಿಟ್ಟರೆ ಈ ಕ್ಷೇತ್ರದಲ್ಲಿ ಬೇರೆಯಾರೂ ಆಯ್ಕೆಗೊಂಡಿಲ್ಲ ಎಂಬುದು ವಿಶೇಷ.

೨೦೦೨ರಲ್ಲಿ ಅಜೀಜ್‌ ಸೇಠ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ತನ್ವೀರ್ ಸೇಠ್ ಅವರು ಮೊದಲ ಬಾರಿಗೆ ಆಯ್ಕೆ. ನಂತರ ನಿರಂತರವಾಗಿ ಗೆಲುವು ಸಾಧಿಸಿದ್ದು ವಿಶೇಷ.

ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ೧,೨೭,೭೨೦ ಮಹಿಳಾ ಮತದಾರರಿದ್ದಾರೆ. ೧,೨೫,೩೩೧ ಪುರುಷ ಮತದಾರರಿದ್ದು, ಒಟ್ಟು ೨,೫೩,೦೫೧ ಮತದಾರರಿದ್ದಾರೆ.

ಮುಸ್ಲೀಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ ೧.೧೫ ಲಕ್ಷ ಮಂದಿ ಮುಸ್ಲೀಂ ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯದವರು ಎರಡನೇ ಸ್ಥಾನದಲ್ಲಿದ್ದು ೨೫ ಸಾವಿರ ಮಂದಿ ಇದ್ದಾರೆ. ಉಳಿದಂತೆ ಒಕ್ಕಲಿಗರು ೧೫ ಸಾವಿರ, ನಾಯಕ ಸಮುದಾಯವರು ೧೪ ಸಾವಿರ, ಲಿಂಗಾಯಿತರು ೧೨ ಸಾವಿರ, ಕ್ರಿಶ್ಚಿಯನ್ನರು ೧೨ ಸಾವಿರ, ಕುರುಬರು ೯ ಸಾವಿರ, ಮರಾಠರು ೯ ಸಾವಿರ, ಬ್ರಾಹ್ಮಣರು ೫ ಸಾವಿರ ಹಾಗೂ ಇತರೆ  ಸಮುದಾಯದ ೩೦ ಸಾವಿರ ಮತದಾರರಿದ್ದಾರೆ.

ಮಂಡಿಮೊಹಲ್ಲಾದ ಕೆಲ ಭಾಗ, ಎನ್.ಆರ್.ಮೊಹಲ್ಲಾ, ಬನ್ನಿಮಂಟಪ, ಹನುಮಂತನಗರ, ಕೆಸರೆ, ರಾಜೇಂದ್ರ ನಗರ, ರಾಜೀವ್ ನಗರ, ಸಿದ್ದಾರ್ಥ ಬಡಾವಣೆಯ ಒಂದು ಭಾಗ, ರಾಘವೇಂದ್ರ ನಗರ, ಕಲ್ಯಾಣಗಿರಿ ನಗರ, ಶಕ್ತಿ ನಗರ, ಉದಯಗಿರಿ, ನಾಯ್ಡು ನಗರ, ಜ್ಯೋತಿ ನಗರ, ಗಾಯತ್ರಿಪುರಂ, ಇಟ್ಟಿಗೆಗೂಡು ಸೇರಿದಂತೆ ಹಲವಾರು ಬಡಾವಣೆಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನರಸಿಂಹರಾಜ ಕ್ಷೇತ್ರವನ್ನು ಈವರೆಗೆ ಅಂದರೆ,  ೧೦ ಅವಧಿಗೆ ತಂದೆ ಮಗನೇ ಪ್ರತಿನಿಧಿಸಿದ್ದಾರೆ.

ಅಜೀಜ್ ಸೇಠ್ ೬ ಬಾರಿ ಆಯ್ಕೆಯಾಗಿದ್ದರೆ, ಅವರ ಮಗ ತನ್ವೀರ್ ಸೇಠ್ ೪ ಬಾರಿ ಚುನಾಯಿತರಾಗಿದ್ದಾರೆ. ಅಜೀಜ್ ಸೇಠ್ ಅವರು ೧೯೮೪ರಲ್ಲಿ ಧಾರವಾಡ ದಕ್ಷಿಣದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆುಂಲ್ಲಿ ಒಮ್ಮೆ ಮಾತ್ರ ಸ್ಪರ್ಧಿಸಿರಲಿಲ್ಲ. ಆಗ ಮುಕ್ತರುನ್ನೀಸಾ ಬೇಗಂ ಆಯ್ಕೆಯಾಗಿದ್ದರು.

೧೯೮೯ರಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಿದ ಅಜೀಜ್ ಸೇಠ್, ನರಸಿಂಹರಾಜ ಕ್ಷೇತ್ರದಿಂದ ಮರು ಆಯ್ಕೆಯಾದರು. ೧೯೯೪ರಲ್ಲಿ ಪಕ್ಷದ ವಿರುದ್ಧ ಎದ್ದಿದ್ದ ಅಲೆಯಲ್ಲಿ ಸೋಲು ತಪ್ಪಿಸಿಕೊಳ್ಳಲು ಪಕ್ಷೇತರರಾಗಿ ಕಣಕ್ಕಿಳಿದರು. ಆದರೆ ಮಾರುತಿರಾವ್ ಪವಾರ್ ವಿರುದ್ಧ ಕೇವಲ ೧೪೫೧ ಮತಗಳ ಅಂತರದಲ್ಲಿ ಮೊದಲ ಸೋಲನುಭವಿಸಿದರು.

೧೯೯೯ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್‌ನಿಂದ ಆಯ್ಕೆಯಾದರು. ಅವಧಿ ಮುಗಿಯುವ ಮುನ್ನವೇ ಅಕಾಲಿಕ ಮರಣಕ್ಕೆ ತುತ್ತಾದರು. ಆನಂತರ ನಡೆದ ಉಪಚುನಾವಣೆಯಲ್ಲಿ ಪುತ್ರ ತನ್ವೀರ್ ಸೇಠ್ ವಿಧಾನಸಭೆಗೆ ಚೊಚ್ಚಲ ಪ್ರವೇಶ ಮಾಡಿದರು. ನಂತರ ೨೦೦೪, ೨೦೦೮, ೨೦೧೩ರ ಚುನಾವಣೆಯಲ್ಲಿ ಸತತವಾಗಿ ಜಯಗಳಿಸಿ ತಂದೆಯ ದಾಖಲೆಯನ್ನು ಸರಿಗಟ್ಟಿದರು.

ಕಳೆದ ಚುನಾವಣೆಯಲ್ಲಿ ಎಸ್‌ಡಿಪಿಐ ಇಲ್ಲಿ ಸ್ಪರ್ಧೆ ನೀಡಿ ತನ್ವೀರ್ ಸೇಠ್ ಅವರಿಗೆ ನೇರ ಸ್ಪರ್ಧೆ ನೀಡಿತ್ತು. ಜೆಡಿಎಸ್ ಸಂದೇಶ್ ಸ್ವಾಮಿ ಕೂಡ ತೀವ್ರ ಪೈಪೋಟಿ ನೀಡಿ ೨೯ ಸಾವಿರಕ್ಕೂ ಹೆಚ್ಚು ಮತಗಳಿಸಿದ್ದರು. ಪ್ರಸ್ತುತ ಕಾಂಗ್ರೆಸ್‌ನ ಹಾಲಿ ಶಾಸಕ ತನ್ವೀರ್ ಸೇಠ್ ಅವರೇ ೫ನೇ ಬಾರಿಗೆ ಕಣಕ್ಕಿಳಿಯುತ್ತಿರುವುದು ಅಧಿಕೃತವಾಗಿ ಘೋಷಣೆಯಾಗಿದೆ.

ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ  ಅಬ್ದುಲ್ ಅಜೀಜ್ (ಅಬ್ದುಲ್ಲಾ) ಅವರೇ ಈ ಬಾರಿಯೂ ಅಭ್ಯರ್ಥಿಯಾಗುವರೇ ಅಥವಾ ಬೇರೆಯವರನ್ನು ಪಕ್ಷ ಕಣಕ್ಕಿಳಿಸುವುದೇ ಎಂಬುದು ಗುಟ್ಟಾಗಿಯೇ ಉಳಿದಿದೆ. ಬಿಜೆಪಿಯ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಅಭ್ಯರ್ಥಿಯಾರು ಎಂಬುದನ್ನು ಪಕ್ಷ ಇನ್ನು ಪ್ರಕಟಿಸಿಲ್ಲ.

ಮುಸ್ಲೀಂ ಮತದಾರರೆ ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐನಿಂದ ಮುಸ್ಲೀಂ ಅಭ್ಯರ್ಥಿಗಳೇ ಕಣದಲ್ಲಿರುವ ಕಾರಣ,  ಈ ಸಮುದಾಯದ ಮತಗಳು ಹಂಚಿಕೆಯಾಗಲಿದೆ. ಆದ್ದರಿಂದ ಮುಸ್ಲಿಂಯೇತರ ಮತಗಳು ಇಲ್ಲಿ ನಿರ್ಣಾಯಕವಾಗಲಿವೆ.

ಈ ತನಕ ಕ್ಷೇತ್ರ ಪ್ರತಿನಿಧಿಸಿದ್ದವರು :

೧೯೬೭    ಅಜೀಜ್‌ಸೇಠ್    ಎಸ್‌ಸ್‌ಪಿ    ೧೩,೧೬೬ ಮತಗಳು

೧೯೭೨    ಅಜೀಜ್‌ಸೇಠ್    ಕಾಂಗ್ರೆಸ್        ೧೭,೭೮೪ ಮತಗಳು

೧೯೭೮    ಅಜೀಜ್‌ಸೇಠ್    ಕಾಂಗ್ರೆಸ್(ಐ)    ೨೮,೭೧೮ ಮತಗಳು

೧೯೮೩    ಅಜೀಜ್‌ಸೇಠ್    ಜನತಾಪಕ್ಷ    ೨೬,೫೭೬ ಮತಗಳು

೧೯೮೫    ಮುಕ್ತರ್‌ಉನ್ನೀಸಾ    ಕಾಂಗ್ರೆಸ್        ೧೫,೫೫೨ ಮತಗಳು

೧೯೮೯    ಅಜೀಜ್‌ಸೇಠ್    ಕಾಂಗ್ರೆಸ್        ೩೯,೮೫೮ ಮತಗಳು

೧೯೯೪    ವಾರುತಿರಾವ್‌ಪವಾರ್    ಬಿಜೆಪಿ    ೩೧,೫೯೨ ಮತಗಳು

೧೯೯೯    ಅಜೀಜ್‌ಸೇಠ್    ಕಾಂಗ್ರೆಸ್        ೫೬,೪೮೫ ಮತಗಳು

೨೦೦೨    ತನ್ವೀರ್‌ಸೇಠ್    ಕಾಂಗ್ರೆಸ್        ೪೧,೩೬೦ ಮತಗಳು

೨೦೦೪    ತನ್ವೀರ್‌ಸೇಠ್    ಕಾಂಗ್ರೆಸ್        ೫೪,೪೬೨ ಮತಗಳು

೨೦೦೮    ತನ್ವೀರ್‌ಸೇಠ್    ಕಾಂಗ್ರೆಸ್        ೩೭,೭೮೯ ಮತಗಳು

೨೦೧೩    ತನ್ವೀರ್‌ಸೇಠ್    ಕಾಂಗ್ರೆಸ್        ೩೮೦೩೭ ಮತಗಳು

Key words : mysore-election-2023-narasimharaja-NR-congress-tanveer.sait