MYSORE, MARCH.29 : ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ರಾಜಕೀಯ ಇತಿಹಾಸವನ್ನು ದಾಖಲಿಸುವ ನಿಟ್ಟಿನಲ್ಲಿ ‘ ಜಸ್ಟ್ ಕನ್ನಡ ‘ ಮಾಲಿಕೆಯ 2 ನೇ ಅಧ್ಯಾಯ..
ಹುಣಸೂರು ವಿಧಾನಸಭಾ ಕ್ಷೇತ್ರ :
ರಾಜ್ಯಕ್ಕೆ ದೇವರಾಜ ಅರಸು ಅವರಂತಹ ಹಿಂದುಳಿದ ನಾಯಕರನ್ನು ಕೊಡುಗೆಯಾಗಿ ನೀಡಿದ್ದೂ ಅಲ್ಲದೇ ಸರ್ವ ಜನಾಂಗದವರನ್ನು ಆಯ್ಕೆ ಮಾಡಿದ ಹಿರಿಮೆಯನ್ನು ಹುಣಸೂರು ವಿಧಾನಸಭಾ ಕ್ಷೇತ್ರ ಹೊಂದಿದೆ.
ಅರಸು ಅವರು ಹುಣಸೂರಿನಿಂದ ಆರು ಬಾರಿ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೂ ಅಲ್ಲದೇ ರಾಜಕೀಯದಲ್ಲೂ ಹೊಸ ಶಖೆಯನ್ನೇ ಆರಂಭಿಸಿದವರು. ಅರಸೂ ಅವರನ್ನೂ ಒಳಗೊಂಡಂತೆ ಬೇರೆ ಬೇರೆ ಜಾತಿಯ, ವಿಭಿನ್ನ ಹಿನ್ನೆಲೆಯ ನಾಯಕರನ್ನು ಗೆಲ್ಲಿಸಿದ್ದು ಹುಣಸೂರು ಕ್ಷೇತ್ರ ವಿಶೇಷ.
ಸಾಮಾನ್ಯ ಕುಟುಂಬದಿಂದ ಬಂದ ಅರಸು ಅವರನ್ನು ಹುಣಸೂರು ಮತದಾರ ಗೆಲ್ಲಿಸಿ ಅಸಮಾನ್ಯರನ್ನಾಗಿ ಮಾಡಿದರು. ೧೯೫೨ರಿಂದ ಸತತ ಮೂರು ದಶಕ ಕಾಲ ಶಾಸಕರಾಗಿದ್ದರು. ಹುಣಸೂರು ಎಂದರೆ ದೇವರಾಜ ಅರಸರು, ಅರಸರು ಎಂದರೆ ಹುಣಸೂರು ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಕ್ಷೇತ್ರವನ್ನು ರಾಜ್ಯದ ಜನ ಗುರುತಿಸುತ್ತಾರೆ.
ವಿಶೇಷಗಳು:
ಅವಿರೋಧ ಆಯ್ಕೆ, ತಂದೆ-ಮಗಳಿಗೆ ಗೆಲವು, ಅಪ್ಪನಿಗೆ ಸೋಲು..ಹೀಗೆ ಹುಣಸೂರು ಕ್ಷೇತ್ರದಲ್ಲಿ ಹತ್ತು ಹಲವು ವಿಶೇಷಗಳಿವೆ. ಅವಿಭಜಿತ ಮೈಸೂರು ಜಿಲ್ಲೆಯ ಅತಿ ಹೆಚ್ಚು ಬಾರಿ ಉಪ ಚುನಾವಣೆ ನಡೆದ ಕ್ಷೇತ್ರ ಇದಾಗಿದೆ. ಅಲ್ಲದೆ ೧೯೫೨ ರಿಂದ ೧೯೮೩ ರವರೆಗೆ ಈ ಕ್ಷೇತ್ರ ಅರಸು ಕುಟುಂಬದ ಹಿಡಿತದಲ್ಲಿತ್ತು. ಡಿ. ದೇವರಾಜ ಅರಸು ಅವರು ೧೯೬೨ ರಲ್ಲಿ ಅವಿರೋಧ ಆಯ್ಕೆಯಾಗಿದ್ದರು. ಅರಸು ಅವರು ೬ ಬಾರಿ ಗೆದ್ದರೆ, ಅವರ ಪುತ್ರಿ ಚಂದ್ರಪ್ರಭ ಅರಸು ೨ ಬಾರಿ ಗೆದ್ದು, ಮತ್ತೆರಡು ಬಾರಿ ಸೋತರು. ಅರಸು ಅವರ ಮತ್ತೋರ್ವ ಪುತ್ರಿ ಭಾರತಿ ಅರಸು ೧೯೯೮ರ ಉಪ ಚುನಾವಣೆಯಲ್ಲಿ ಬಿಜೆಪಿ- ಲೋಕಶಕ್ತಿ ಅಭ್ಯರ್ಥಿಯಾಗಿ, ಚಂದ್ರಪ್ರಭ ಅರಸು ಪುತ್ರ ಮಂಜುನಾಥ್ ಅರಸು ೨೦೧೩ ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸೋತರು. ಹಾಲಿ ಶಾಸಕ ಮಂಜುನಾಥ್ ಅವರ ತಂದೆ, ಕಟ್ಟಾ ಕಾಂಗ್ರೆಸಿಗರಾದ ಎಚ್.ಎನ್.ಪ್ರೇಮಕುಮಾರ್ ಎರಡು ಬಾರಿ ಸೋತಿದ್ದರೆ, ಮಗನನ್ನು ಕ್ಷೇತ್ರದ ಜನ ಮೂರು ಬಾರಿ ಗೆಲ್ಲಿಸಿದರು. ಇದೇ ತಾಲ್ಲೂಕಿನವರಾದ ಎಸ್.ಚಿಕ್ಕಮಾದು ಒಮ್ಮೆ ಮಾತ್ರ ಮರು ಚುನಾವಣೆಯಲ್ಲಿ ಗೆದ್ದು ನಂತರ ನೆರೆಯ ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಹೋಗಿ ಗೆದ್ದರು. ಈಗ ಅವರ ಪುತ್ರ ಅನಿಲ್ ಚಿಕ್ಕಮಾದು ಕೂಡ ಶಾಸಕರಾಗಿದ್ಧಾರೆ. ಸ್ಥಳೀಯರೇ ಆದ ವಿ.ಪಾಪಣ್ಣ ಒಮ್ಮೆ ಬಿಜೆಪಿಯಿಂದ ಗೆದ್ದಿದ್ದರು.
ಹೊರಗಿನವರಿಗೂ ಮಣೆ:
ದೂರದ ಬ್ಯಾಡಗಿಯಿಂದ ಸಹೋದರಿ ಊರು ಹುಣಸೂರಿಗೆ ಬಂದು ಸಿ.ಎಚ್.ವಿಜಯಶಂಕರ್ ೧೯೯೪ರಲ್ಲಿ ಇಲ್ಲಿಂದ ಗೆದ್ದರು. ಆನಂತರ ಎರಡು ಬಾರಿ ಸಂಸದರಾದರೂ ಮತ್ತೆ ಇಲ್ಲಿ ಸ್ಪರ್ಧಿಸಲು ಆಗಲಿಲ್ಲ. ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರದವರಾದ ಜಿ.ಟಿ.ದೇವೇಗೌಡ ಅವರನ್ನು ಹುಣಸೂರು ಕ್ಷೇತ್ರದ ಜನ ಎರಡು ಬಾರಿ ಗೆಲ್ಲಿಸಿ ಎರಡು ಬಾರಿ ಸೋಲಿಸಿದ್ದೂ ಇದೆ. ಕೆಆರ್‌ನಗರ ತಾಲ್ಲೂಕಿನವರಾದ ಎಚ್.ವಿಶ್ವನಾಥ್ ಜಾ.ದಳದಿಂದ ಇಲ್ಲಿ ಗೆದ್ದರು. ಮರು ವರ್ಷವೇ ರಾಜೀನಾಮೆ ನೀಡಿ ಬಿಜೆಪಿಯಿಂದ ಚುನಾವಣೆ ಎದುರಿಸಿ ಸೋತರು.
ನಾಲ್ಕು ಉಪಚುನಾವಣೆ :
ಒಂದಲ್ಲ ನಾಲ್ಕು ಬಾರಿ ಉಪಚುನಾವಣೆ. ೧೯೭೨ರಲ್ಲಿ ಡಿ.ಕರಿಯಪ್ಪಗೌಡರಿಂದ ರಾಜೀನಾಮೆ ಕೊಡಿಸಿ ಉಪ ಚುನಾವಣೆಯಲ್ಲಿ ಡಿ.ದೇವರಾಜ ಅರಸು ಗೆಲ್ಲುವ ಮೂಲಕ ಎರಡನೇ ಬಾರಿಗೆ ಸಿ.ಎಂ. ಆದರು. ೧೯೮೯ರಲ್ಲಿ ಚಂದ್ರ ಪ್ರಭ ಅರಸು ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಲೋಕಸಭೆ ಆಯ್ಕೆಯಾದರು. ಆಗ ಎಸ್.ಚಿಕ್ಕವಾದು ಅವರು ಗೆದ್ದರು. ೧೯೯೮ರಲ್ಲಿ ಸಿ.ಎಚ್. ವಿಜಯಶಂಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆ ಆಯ್ಕೆಯಾದರು. ಆಗ ಜಿ.ಟಿ.ದೇವೇಗೌಡರು ಗೆದ್ದರು. ೨೦೧೯ರಲ್ಲಿ ಎಚ್.ವಿಶ್ವನಾಥ್ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾದ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ಹ್ಯಾಟ್ರಿಕ್ ತಪ್ಪಿಸಿಕೊಂಡರೂ ಮೂರನೇ ಬಾರಿಗೆ ಎಚ್.ಪಿ.ಮಂಜುನಾಥ್ ಗೆದ್ದರು.
ಕಣದಲ್ಲಿ ಈಗ :
ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈಗಾಗಲೇ ಮೂರು ಬಾರಿ ಗೆದ್ದಿರುವ ಮಂಜುನಾಥ್ ಮತ್ತೆ ಅಖಾಡದಲ್ಲಿ.
ಜಾ.ದಳದಿಂದ ಜಿಟಿಡಿ ಪುತ್ರ ಹಾಗೂ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನು ತೀರ್ಮಾನವಾಗಿಲ್ಲ.
ಕ್ಷೇತ್ರ ಪ್ರತಿನಿಧಿಸಿದವರ ಮಾಹಿತಿ :
೧೯೫೨. ಡಿ. ದೇವರಾಜ ಅರಸು(ಕಾಂಗ್ರೆಸ್)
೧೯೫೭ ಡಿ. ದೇವರಾಜ ಅರಸು ಮತ್ತು ಎನ್ ರಾಚಯ್ಯ, ದ್ವಿಸದಸ್ವ ಕ್ಷೇತ್ರ (ಇಬ್ಬರೂ ಕಾಂಗ್ರೆಸ್)
೧೯೬೨- ಡಿ. ದೇವರಾಜ ಅರಸು (ಕಾಂಗ್ರೆಸ್, ಅವಿರೋಧ ಆಯ್ಕೆ)
೧೯೬೭- ಡಿ. ದೇವರಾಜ ಅರಸು (ಕಾಂಗ್ರೆಸ್)
೧೯೭೨- ಡಿ. ಕರಿಯಪ್ಪಗೌಡ (ಕಾಂಗ್ರೆಸ್)
೧೯೭೨- ಉಪಚುನಾವಣೆ- ಡಿ. ದೇವರಾಜ ಅರಸು (ಕಾಂಗ್ರೆಸ್)
೧೯೭೮- ಡಿ. ದೇವರಾಜ ಅರಸು (ಕಾಂಗ್ರೆಸ್)
೧೯೮೩- ಚಂದ್ರಪ್ರಭ ಆರಸು (ಜನತಾಪಕ್ಷ)
೧೯೮೫- ಡಾ.ಎಚ್.ಎಲ್, ತಿಮ್ಮೇಗೌಡ (ಜನತಾಪಕ್ಷ)
೧೯೮೯- ಚಂದ್ರಪ್ರಭ ಅರಸು (ಕಾಂಗ್ರೆಸ್)
೧೯೯೧- ಉಪಚುನಾವಣೆ-ಎಸ್, ಚಿಕ್ಕವಾದು (ಕಾಂಗ್ರೆಸ್)
೧೯೯೪- ಸಿ.ಎಚ್. ವಿಜುಂಶಂಕರ್(ಬಿಜೆಪಿ)
೧೯೯೮- ಉಪಚುನಾವಣೆ-ಜಿ.ಟಿ. ದೇವೇಗೌಡ (ಜನತಾದಳ)
೧೯೯೯- ವಿ. ಪಾಪಣ್ಣ (ಬಿಜೆಪಿ)
೨೦೦೪- ಜಿ.ಟಿ. ದೇವೇಗೌಡ (ಜಾ.ದಳ)
೨೦೦೮- ಎಚ್.ಪಿ. ಮಂಜುನಾಥ್ (ಕಾಂಗ್ರೆಸ್)
೨೦೧೩- ಎಚ್.ಪಿ. ಮಂಜುನಾಥ್ (ಕಾಂಗ್ರೆಸ್)
೨೦೧೮ ಎಚ್.ವಿಶ್ವನಾಥ್ (ಜೆಡಿಎಸ್)
೨೦೧೯ ಉಪ ಚುನಾವಣೆ ಎಚ್.ಪಿ.ಮಂಜುನಾಥ್ (ಕಾಂಗ್ರೆಸ್ ).
KEY WORDS : mysore-election-2023-hunsuru-congress-jds-bjp