ಭಾರತೀಯ ಮೂಲದ ಟ್ವಿಟ್ಟರ್ ಸಿಇಒ ಪರಾಗ್ ಅವರನ್ನು ಹೊರಗಟ್ಟಿದ ಎಲನ್ ಮಸ್ಕ್: ಆದರೂ ಬಹು ಶ್ರೀಮಂತರಾಗಿ ಹೊರಬಂದ ಪರಾಗ್.

ನವದೆಹಲಿ, ಅಕ್ಟೋಬರ್ 28,2022 (www.justkannada.in): ಒಂದು ತಿಂಗಳ ಪೂರ್ತಿ ಬಹು ಆಯಾಮಗಳು ಮತ್ತು ತಿರುವುಗಳ ನಂತರ ಟೆಸ್ಲಾ ಸಿಇಒ ಎಲನ್ ಮಸ್ಕ್ ಅವರು ಅಂತಿಮವಾಗಿ ಟ್ವಿಟ್ಟರ್ ಅನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಸಂಸ್ಥೆಯನ್ನು ವಶಕ್ಕೆ ಪಡೆದ ಕೆಲವೇ ನಿಮಿಷಗಳ ಒಳಗಾಗಿ ಬಹಳ ಮೊದಲಿನಿಂದಲೂ ನಿರೀಕ್ಷಿಸಿದ ಹಾಗೆಯೇ ಟ್ವಿಟ್ಟರ್‌ ನ ಅತ್ಯಂತ ಉನ್ನತ ಎಕ್ಸಿಕ್ಯೂಟಿವ್‌ ಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

ಕಂಪನಿಯ ಸಿಇಒ ಪರಾಗ್ ಅಗರ್‌ವಾಲ್, ಕಾನೂನು ಮುಖ್ಯಸ್ಥ ಹಾಗೂ ನೀತಿ ರೂಪಕ ವಿಜಯ ಗಡ್ಡೆ, ಹಾಗೂ ಸಿಎಫ್‌ ಒ ನೆಲ್ ಸೆಗಲ್, ಈ ಮೂರು ವ್ಯಕ್ತಿಗಳನ್ನು ಕಂಪನಿಯಿಂದ ಸೇವೆಗಳಿಂದ ಮುಕ್ತಗೊಳಿಸಿದ್ದಾರೆ. ಆದರೆ ನವೆಂಬರ್ 2021ರಲ್ಲಿ ಟ್ವಿಟ್ಟರ್‌ ನ ಸಿಇಒ ಆಗಿ ನೇಮಕಗೊಂಡ ಪರಾಗ್ ಅಗರ್‌ ವಾಲ್ ಅವರು ಅತ್ಯಂತ ಶ್ರೀಮಂತನಾಗಿ ಕಂಪನಿಯಿಂದ ಹೊರಗೆ ಬರುತ್ತಿದ್ದಾರೆ. ವರದಿಗಳ ಪ್ರಕಾರ, ಟ್ವಿಟ್ಟರ್ ಸಂಸ್ಥೆಯ ನಿರ್ವಹಣೆ ಬದಲಾಗಿ, ೧೨ ತಿಂಗಳ ಒಳಗಾಗಿ ಕೆಲಸದಿಂದ ಪರಾಗ್ ಅಗರ್‌ವಾಲ್ ಅವರನ್ನು ತೆಗೆದುಹಾಕಿದರೆ ಟ್ವಿಟ್ಟರ್ ಕಡೆಯಿಂದ ಅವರಿಗೆ ಬರೋಬ್ಬರಿ ೪೨ ದಶಲಕ್ಷ ಡಾಲರ್‌ಗಳನ್ನು ನೀಡಬೇಕಾಗುತ್ತದೆ.

ಅಗರ್‌ ವಾಲ್ ಅವರು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮಾಜಿ ಸಿಇಒ ಜಾಕ್ ಡಾರ್ಸಿ ಅವರ ರಾಜೀನಾಮೆಯ ನಂತರ, ಟ್ವಿಟ್ಟರ್‌ ನ ಸಿಇಒ ಆಗಿ ನೇಮಕಗೊಂಡರು. ಆಗ ಅವರ ಒಟ್ಟು ವಾರ್ಷಿಕ ವೇತನ ೩೦.೪ ದಶಲಕ್ಷ ಡಾಲರ್‌ ಗಳಾಗಿತ್ತು. ಪ್ರಸ್ತುತ ಅಗರ್‌ ವಾಲ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಕಂಪನಿಯೊಂದಿಗೆ ಅವರ ಸುಮಾರು ದಶಕದಷ್ಟು ಸುದೀರ್ಘ ಸೇವೆ ಅಂತಿಮಗೊಂಡಂತಾಗಿದೆ. ಪರಾಗ್ ಅವರು ಟ್ವಿಟ್ಟರ್ ಸಂಸ್ಥೆಗೆ ಕೇವಲ ೧೦೦೦ ಉದ್ಯೋಗಿಗಳು ಇದ್ದಾಗ ಸೇರ್ಪಡೆಗೊಂಡಿದ್ದರು.

ಎಲನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಲಿದ್ದಾರೆ ಎಂದು ಚರ್ಚೆಗಳು ಆರಂಭವಾದಾಗಲೇ ಪರಾಗ್ ಅವರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಗ್ರಹಿಸಲಾಗಿತ್ತು. ಮಸ್ಕ್ ಪ್ರಕಾರ ಟ್ವಿಟ್ಟರ್‌ ನ ಉನ್ನತ ಮಟ್ಟದ ಸಿಬ್ಬಂದಿಗಳು ಅಸಮರ್ಥರು. ಸೋರಿಕೆಯಾದ ಅವರ ಚಾಟ್ ಸಂದೇಶಗಳ ಮೂಲಕ ಆತ ಪರಾಗ್ ಅಗರ್‌ವಾಲ್ ಅನ್ನು ಮೆಚ್ಚುವುದಿಲ್ಲ ಹಾಗೂ ಟ್ವಿಟ್ಟರ್ ಕಂಪನಿ ಕೈವಶವಾಗುತ್ತಲೇ, ಸಾಧ್ಯವಾದಷ್ಟೂ ಬೇಗ ಆತನನ್ನು ಕಂಪನಿಯಿಂದ ಬಿಗುಡಗಡೆಗೊಳಿಸಲು ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು.

ಸುದ್ದಿ ಮೂಲ: ಇಂಡಿಯಾ ಟುಡೆ.

Key words : Elon Musk- Indian-origin- Twitter CEO- Parag