ಮಂಗಳೂರು,ಆ,26,2020(www.justkanada.in): ರಾಜ್ಯದ ನಗರ, ಪಟ್ಟಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ| ನಾರಾಯಣ ಗೌಡ ತಿಳಿಸಿದ್ದಾರೆ.
ಅವರು ಪುತ್ತೂರು ನಗರಸಭೆಯ ನೂತನ ಕಚೇರಿ ಕಟ್ಟಡ ಶಿಲಾನ್ಯಾಸ ನವೀಕೃತ ಪುರಸಭವನ ಹಾಗೂ ನವೀಕೃತ ಗಾಂಧಿ ಕಟ್ಟೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕುಡಿಯುವ ನೀರು, ರಸ್ತೆ, ತ್ಯಾಜ್ಯ ನಿರ್ವಹಣೆಯಂತಹ ಸಮಸ್ಯೆಗಳನ್ನು ಪರಿಹರಿಸಿದರೆ ಪಟ್ಟಣಗಳು ಅಭಿವೃದ್ಧಿಯಾಗಲು ಸಾಧ್ಯವಿದೆ. ಮುಖ್ಯಮಂತ್ರಿಯವರು ಕೂಡಾ ನಗರಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಡಿ ಪಟ್ಟಣ ಪ್ರದೇಶಗಳ ಪ್ರಗತಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯು ಮಹಾನಗರಗಳ ಪ್ರಗತಿಗೆ ದೊಡ್ಡ ಕೊಡುಗೆ ನಿಡುತ್ತಿದೆ. ಅದೇ ರೀತಿ ಸಣ್ಣ, ಮಧ್ಯಮ ಪಟ್ಟಣಗಳ ನಾಗರೀಕರ ಜೀವನೋಪಾಯ ಸುಧಾರಿಸಲು ನಗರ ಸ್ತಳಿಯ ಸಂಸ್ಥೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು.
ರಾಷ್ಟೀಯ ಸ್ವಚ್ಚ ಸವೇಕ್ಷಣೆಯಲ್ಲಿ 2020ನೇ ಸಾಲಿನಲ್ಲಿ ರಾಜ್ಯದಲ್ಲಿನ ನಗರಸಭೆಗಳ ಪೈಕಿ ಪುತ್ತೂರು ನಗರಸಭೆಯು ಸ್ವಚ್ಚತೆಯಲ್ಲಿ 6ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ನಿರಂತರ ನೀರು ಪೂರೈಸುವ ಜಲಸಿರಿ ಯಯೋಜನೆಯಡಿ ರೂ. 113 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ 2 ವರ್ಷದೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. ಶಾಸಕರು ಸಲ್ಲಿಸುವ ಎಲ್ಲಾ ಬೇಡಿಕೆಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪ್ರಜಾರಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ವರ್ಷಗಳು ಪೂರ್ಣಗೊಂಡಿದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಖಾಲಿಯಾಗಿವೆ. ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ನಡೆದಿದ್ದು, ಮೀಸಲಾತಿ ಪಟ್ಟಿಯಲ್ಲಿ ಈ ಹಿಂದೆ ಉಂಟಾದ ಲೋಪಗಳನ್ನು ಸರಿಪಡಿಲಾಗುವುದು. ವಿಶೇಷವಾದ ಸಮಿತಿ ರಚಿಸಿ ವರದಿಯನ್ನು ಪಡೆದು ನ್ಯಾಯಲಯಕ್ಕೆ ಸಲ್ಲಿಸಿ ಅದಷ್ಟು ಬೇಗನೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ನೇಮಕ ಮಾಡಲಾಗುವುದು. ಮೀಸಲಾತಿ ಆಧಾರದಲ್ಲಿ ಅವಕಾಶ ನೀಡಲಾಗುವುದು. ಒಮ್ಮೆ ಅವಕಾಶ ಪಡೆದಿರುವರಿಗೆ ಮತೊಮ್ಮೆ ಅವಕಾಶವಿರುವುದಿಲ್ಲ ಎಂದರು
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕ ಪ್ರತಾಪಸಿಂಹ ನಾಯಕ್ ಮತ್ತಿತರು ಉಪಸ್ಥಿತರಿದ್ದರು.
Key words: Emphasis – infrastructure- development – urban -areas -Narayana Gowda.