ಬೆಳಗಾವಿ, ಜೂನ್ ,2,2022 (www.justkannada.in): ಬೆಳಗಾವಿಯಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕಟ್ಟಿರುವಂತಹ ಸುವರ್ಣ ವಿಧಾನ ಸೌಧಕ್ಕೆ ಪ್ರಮುಖ ಸಚಿವಾಲಯದ ಕಚೇರಿಗಳನ್ನು ಸ್ಥಳಾಂತರಿಸುವಂತೆ ಬಹಳ ದಿನಗಳಂತ ಬೇಡಿಕೆ ಇದೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರದಿಂದ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರ ಫಲವಾಗಿ ಅಲ್ಲಿ ಕೆಲಸ ನಿರ್ವಹಿಸುತ್ತಿರುವಂತಹ ಕಾರ್ಮಿಕರು ಸುವರ್ಣ ವಿಧಾನ ಸೌಧವನ್ನು ತಮಗಿಷ್ಟ ಬರುವಂತೆ ಉಪಯೋಗಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.
ಹೌದು. ಬರೋಬ್ಬರಿ ರೂ.೪೦೦ ಕೋಟಿ ವೆಚ್ಚದಲ್ಲಿ ನಿರ್ಮಿಸಿದಂತಹ ಸುವರ್ಣ ವಿಧಾನಸೌಧದ ಮೆಟ್ಟಿಲುಗಳನ್ನು ಬಿಸಿಲಿನಲ್ಲಿ ಶ್ಯಾವಿಗೆ ಒಣಗಿಸಲು ಬಳಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಸಂಗತಿ ಮಂಗಳವಾರ ಗಮನಕ್ಕೆ ಬಂದು ಅಲ್ಲಿನ ಜನರಿಗೆ ಆಘಾತವಾಗಿದೆ.
ಸುವರ್ಣ ವಿಧಾನ ಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ಶ್ಯಾವಿಗೆ ಒಣಗಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಇದರಿಂದಾಗಿ ಸುವರ್ಣ ವಿಧಾನ ಸೌಧದ ಅಸಮರ್ಪಕ ಬಳಕೆಯ ಕುರಿತು ಚರ್ಚೆಗಳು ಆರಂಭವಾದವು.
ರಾಜ್ಯದ ಎರಡನೇ ಸಚಿವಾಲಯದ ಕಚೇರಿ ಉದ್ಘಾಟನೆಯಾದಾಗಿನಿಂದಲೂ, ಸುವರ್ಣ ವಿಧಾನ ಸೌಧವನ್ನು ಶಕ್ತಿಸೌಧವನ್ನಾಗಿಸುವ ಸಲುವಾಗಿ ಸಚಿವಾಲಯ ಮಟ್ಟದ ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಬೇಡಿಕೆಯಿದೆ. ಆದರೆ ಈವರೆಗೆ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳೂ ಸಹ ಈ ಬೇಡಿಕೆಯನ್ನು ಈಡೇರಿಸಿಲ್ಲ.
ಸುಮಾರು ಒಂದು ವರ್ಷದ ಹಿಂದೆ, ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ಕೆಲವು ಜಿಲ್ಲಾಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಲಾಯಿತು. ಆಗ ಅದು ಮಿನಿ ವಿಧಾನ ಸೌಧದಂತೆ ಗೋಚರಿಸಲಾರಂಭಿಸಿತ್ತು.
ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಮಟ್ಟದ ಏಕೈಕ ಕಚೇರಿ ಎಂದರೆ ಮಾಹಿತಿ ಆಯುಕ್ತರ ಕಚೇರಿ. ರಾಜ್ಯಮಟ್ಟದ ಕಚೇರಿಗಳನ್ನು ಇನ್ನೂ ಸ್ಥಳಾಂತರಿಸದೇ ಇರುವ ಕಾರಣದಿಂದಾಗಿ ಹಾಗೂ ಜಿಲ್ಲಾಮಟ್ಟದ ಸರ್ಕಾರಿ ಕಚೇರಿಗಳಿಗೆ ಅಷ್ಟು ಜನರ ಓಡಾಟ ಇಲ್ಲದಿರುವ ಕಾರಣದಿಂದಾಗಿ ಸುವರ್ಣ ವಿಧಾನಸೌಧದ ಅಮಾಯಕ ಸ್ವಚ್ಛತಾ ಕಾರ್ಮಿಕರು ಸೌಧದ ಆವರಣವನ್ನು ಅವರಿಗಿಷ್ಟ ಬಂದಂತೆ ಬಳಸಿಕೊಳ್ಳುವಂತಾಗಿದೆ.
ಮಲ್ಲವ್ವ ಎಂಬ ಹೆಸರಿನ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ ಆಕೆಯ ಕುಟುಂಬಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಶ್ಯಾವಿಗೆ ಖರೀದಿಸಿದ್ದಳು. ಆಕೆ ಖರೀದಿಸಿದ್ದ ಉತ್ಪನ್ನವನ್ನು ಸಂಪೂರ್ಣವಾಗಿ ಒಣಗಿಸಬೇಕಾಗಿತ್ತು. ಕಟ್ಟಡದ ಪ್ರಾಮುಖ್ಯತೆ ಬಗ್ಗೆ ಅರಿವಿಲ್ಲದಿರುವ ಮಲ್ಲವ್ವ, ರಾಜ್ಯದ ಎರಡನೇ ಸಚಿವಾಲಯ ಕಟ್ಟಡದ ಮೆಟ್ಟಿಲುಗಳ ಮೇಲೆ ಟವೆಲ್ ಹರಡಿ ಅದರ ಮೇಲೆ ಶ್ಯಾವಿಗೆಯನ್ನು ಬಿಸಿಲಿನಲ್ಲಿ ಒಣಗಿಸಲು ಹರಡಿದಳು. ಶ್ಯಾವಿಗೆಯನ್ನು ತರಲು ಆಕೆ ತೆಗೆದುಕೊಂಡು ಹೋಗಿದ್ದಂತಹ ಕೈಚೀಲವೂ ಸಹ ಬಿಸಿಲಿನಲ್ಲಿ ಒಣಗುತ್ತಿರುವುದು ಚಿತ್ರದಲ್ಲಿ ಕಾಣಿಸಿದೆ.
ಲೋಕೋಪಯೋಗ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಲ್. ಭೀಮಾನಾಯಕ್ ಅವರು ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿ ಈ ಸಂಗತಿ ಅವರಿಗೆ ಗೊತ್ತಾದ ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಮೆಟ್ಟಿಲುಗಳ ಮೇಲಿಂದ ಶ್ಯಾವಿಗೆಯನ್ನು ತೆರವುಗೊಳಿಸುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ. ಮಲ್ಲವ್ವನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: employee-suspend-suvarna vidhana soudha-drying-shavige