ಇಂಜಿನಿಯರಿಂಗ್ ಸೀಟು ಕಡಿತ

ಬೆಂಗಳೂರು:ಮೇ-21: ಬೇಡಿಕೆ ಕೊರತೆಯಿಂದಾಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೆಕಾನಿಕಲ್ ಮತ್ತು ಸಿವಿಲ್ ವಿಭಾಗಗಳಲ್ಲಿ ಸೀಟುಗಳನ್ನು ಕಡಿಮೆಗೊಳಿಸಲಾಗಿದೆ. 2019-20ರ ಶೈಕ್ಷಣಿಕ ಅವಧಿಗೆ ದೇಶದಲ್ಲಿ ಡಿಪ್ಲೊಮಾ, ಪದವಿ ಅಥವಾ ಸ್ನಾತಕೋತ್ತರ ಪದವಿಗೆ 2.21 ಲಕ್ಷ ಸೀಟುಗಳನ್ನು ಕಡಿತಗೊಳಿಸಲಾಗಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ದತ್ತಾಂಶದ ಪ್ರಕಾರ ಪ್ರಸಕ್ತ ವರ್ಷ 3,660 ವಿವಿ/ ಶಿಕ್ಷಣ ಸಂಸ್ಥೆಗಳು ಡಿಪ್ಲೊಮಾ ಕೋರ್ಸ್ ಗಳನ್ನು (10,25,408 ಸೀಟುಗಳು) ಮತ್ತು 3,122 ಶಿಕ್ಷಣ ಸಂಸ್ಥೆಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳನ್ನು, 14,66,114 ಸೀಟುಗಳನ್ನು ನೀಡುತ್ತಿವೆ. 2018-19 ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಕಡಿಮೆಯಾಗಿದೆ.

ಎಐಸಿಟಿಇ ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ಶಿಕ್ಷಣ ಸಂಸ್ಥೆಗಳಿಗೆ ಒಟ್ಟಾರೆ 54,618 ಸೀಟುಗಳಿಗೆ ಅನುಮೋದನೆ ನೀಡಿತ್ತು. ಆದರೆ ವಿಭಾಗವಾರು ಸೀಟು ಹಂಚಿಕೆ ಮಾಹಿತಿ ನೀಡಿರಲಿಲ್ಲ. ಮಾಹಿತಿ ಮತ್ತು ತಂತ್ರಜ್ಞಾನ ಹೊಸ ವಿಭಾಗಕ್ಕೆ ಅನುಮೋದನೆಗೆ ಅರ್ಜಿ ಸಲ್ಲಿಸಿರುವುದಾಗಿ ಕಾಲೇಜುಗಳು ಹೇಳಿಕೊಂಡಿವೆ. 11, 431 ಹೊಸ ಸೀಟುಗಳ ಅನುಮೋದನೆಯೊಂದಿಗೆ ಕರ್ನಾಟಕ ಉನ್ನತ ಸ್ಥಾನದಲ್ಲಿದೆ. ನಂತರದ ಸ್ಥಾನ ಉತ್ತರ ಪ್ರದೇಶ (6,987). ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕ್ರಮವಾಗಿ 7,836 ಮತ್ತು 6,895 ಸೀಟುಗಳು ಕಡಿಮೆಯಾಗಿವೆ. ಮಹಾರಾಷ್ಟದಲ್ಲಿ 27 ಡಿಪ್ಲೊಮಾ/ಪಾಲಿಟೆಕ್ನಿಕ್ ಮುಚ್ಚಲು ಮನವಿ ಸಲ್ಲಿಸಲಾಗಿದೆ.

ಫಾರ್ಮಸಿ ಸೀಟು ಶೇ.30 ಹೆಚ್ಚಳ

ಬೆಂಗಳೂರು: ದೇಶದಲ್ಲಿ ಫಾರ್ಮಸಿ ಕೋರ್ಸ್​ಗಳಿಗೆ ಬೇಡಿಕೆ ಹೆಚ್ಚಿದ ಕಾರಣ ಸೀಟುಗಳ ಸಂಖ್ಯೆಯೂ ಶೇ.30 ಹೆಚ್ಚಾಗಿದೆ. ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್ (ಎಐಸಿಟಿಇ) ದತ್ತಾಂಶ ಪ್ರಕಾರ, 2018-19 ಸಾಲಿನಲ್ಲಿ ದೇಶಾದ್ಯಂತ ಫಾರ್ಮಸಿ ಕೋರ್ಸ್ ಗಳ ಸೀಟುಗಳ ಸಂಖ್ಯೆ 2,04,951 ಇತ್ತು. ಪ್ರಸಕ್ತ ಸಾಲಿನಲ್ಲಿ ಅವುಗಳ ಸಂಖ್ಯೆ 2,62,698 ಆಗಿದೆ. ಈ ವರ್ಷ 81 ಫಾರ್ಮಸಿ ಕಾಲೇಜುಗಳ ಆರಂಭಕ್ಕೆ ಎಐಸಿಟಿಇ ಮಾನ್ಯತೆ ನೀಡಿದ್ದು, ದೇಶದಲ್ಲಿರುವ ಫಾರ್ಮಸಿ ಕಾಲೇಜುಗಳ ಸಂಖ್ಯೆ 2306ಕ್ಕೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಫಾರ್ಮಸಿ ಕ್ಷೇತ್ರ ಟ್ರೆಂಡಿಂಗ್​ನಲ್ಲಿದ್ದು, ಸಾಕಷ್ಟು ಬೇಡಿಕೆ ಕಂಡುಬಂದಿದೆ. ಕಳೆದ ವರ್ಷವೂ ಹಲವು ಫಾರ್ಮಸಿ ಕಾಲೇಜುಗಳ ಆರಂಭಕ್ಕೆ ಮಾನ್ಯತೆ ನೀಡಲಾಗಿತ್ತು. ಸೂಕ್ತ ಪ್ರಮಾಣದಲ್ಲಿ ಮೂಲಸೌಕರ್ಯ ಮತ್ತು ಸಿಬ್ಬಂದಿ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಡಿ. ಸಹಸ್ರಬುಧೆ ಹೇಳಿದ್ಧಾರೆ.

ನೀಟ್ ಮರುಪರೀಕ್ಷೆ ಸುಗಮ

ಬೆಂಗಳೂರು: ರೈಲು ವಿಳಂಬದಿಂದ ನೀಟ್ ಪರೀಕ್ಷೆ ತಪ್ಪಿಸಿಕೊಂಡಿ ರುವ ವಿದ್ಯಾರ್ಥಿಗಳಿಗಾಗಿ ನಡೆಸಿದ ಮರುಪರೀಕ್ಷೆ ಸೋಮವಾರ ಸುಗಮವಾಗಿ ಪೂರ್ಣಗೊಂಡಿದೆ. ಮೇ 5ರಂದು ನಡೆದಿದ್ದ ಮೊದಲ ಸುತ್ತಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ತಡವಾಗಿ ಪರೀಕ್ಷೆ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಈ ಅವಕಾಶ ಕಲ್ಪಿಸಲಾಗಿತ್ತು. ಮರುಪರೀಕ್ಷೆಗೆ 140 ವಿದ್ಯಾರ್ಥಿಗಳಷ್ಟೇ ನೋಂದಣಿ ಮಾಡಿಕೊಂಡಿದ್ದರು.
ಕೃಪೆ:ವಿಜಯವಾಣಿ

ಇಂಜಿನಿಯರಿಂಗ್ ಸೀಟು ಕಡಿತ

engineering-seat-reduction