ಬೆಂಗಳೂರು,ಜನವರಿ,24,2023(www.justkannada.in): ಪತ್ರಿಕೆಗಳು ಜನರನ್ನು ಮುಟ್ಟಿದರೆ ಸಾಲದು, ಅವರ ಮನಸ್ಸನ್ನು ತಟ್ಟಬೇಕು. ಪತ್ರಿಕೋದ್ಯಮವನ್ನು ಫ್ಯಾಶನ್ ಆಗಿ ಪರಿಗಣಿಸದೆ ವೃತ್ತಿ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲದ ಕುಲಪತಿ, ಪತ್ರಕರ್ತ ಡಾ.ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.
ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಸಮಕಾಲೀನ ಪತ್ರಿಕೋದ್ಯಮ’ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಹಣವನ್ನು ಬಿತ್ತಿ ಹಣ ತೆಗೆಯುವ ಉದ್ಯಮವಾಗುತ್ತಿರುವುದು ದುರಂತ. ಹಿಂದೆಲ್ಲ ಸಂಪಾದಕರ ನಿರ್ಣಯವೇ ಅಂತಿಮವಾಗಿರುತಿತ್ತು. ಇಂದು ಮಾಲೀಕರ ಇಚ್ಛೆಗೆ ವಿರುದ್ಧವಾಗಿ ಪ್ರತಿಭಾವಂತರನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಸಂಪಾದಕರು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತಂದ ‘ಅಂತರ್ಮುಖಿ- ಸಂದರ್ಶನಗಳ ಸಂಗ್ರಹ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಸಂವಾದದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪ್ರೊ. ಎಸ್. ಎನ್. ನಾಗರಾಜ ರೆಡ್ಡಿ, ಪ್ರಾಂಶುಪಾಲರಾದ ಡಾ.ವೈ.ಸಿ ಕಮಲ, ಉಪ ಪ್ರಾಂಶುಪಾಲರಾದ ಪ್ರೊ. ಎಚ್. ಸಿ. ಬೆಲ್ಲದ್ , ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಜಯಸಿಂಹ, ಡಾ. ವೈಶಾಲಿ ಎಚ್.ಬಿ, ಅಧ್ಯಾಪಕರು ಭಾಗವಹಿಸಿದ್ದರು.
Key words: enough – media- touch- people-Dr. Niranjan Vanalli