ಮೈಸೂರು,ಡಿಸೆಂಬರ್,16,2024 (www.justkannada.in): ಮೈಸೂರಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ದಾಳಿಗೆ 10 ಮೇಕೆಗಳು ಬಲಿಯಾಗಿರುವ ಘಟನೆ ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿಯಲ್ಲಿ ನಡೆದಿದೆ.
ಧನಗಳ್ಳಿ ಗ್ರಾಮದ ರೈತ ಬಸವರಾಜು ಎಂಬುವರಿಗೆ ಸೇರಿದ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ. ಮೇಕೆ ಸಾಕಾಣಿಕೆಯಿಂದ ರೈತ ಬಸವರಾಜು ಜೀವನ ಸಾಗಿಸುತ್ತಿದ್ದರು. ಆದರೆ ಚಿರತೆ ದಾಳಿಯಿಂದ ಮೇಕೆಗಳನ್ನ ಕಳೆದುಕೊಂಡ ಬಸವರಾಜು ಕಂಗಾಲಾಗಿದ್ದು ಇತ್ತ ಮೈಸೂರು ನಗರದ ಸಮೀಪದಲ್ಲೇ ಚಿರತೆ ದಾಳಿಯಾಗಿರುವುದರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ.
ರೈತ ಬಸವರಾಜು ಎಂದಿನಂತೆ ಗ್ರಾಮದ ಸಮೀಪದ ಕೆಎಚ್‌ಬಿ ಕಾಲೋನಿ ಬಳಿ ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಸಂಜೆ ಮೇಕೆಗಳನ್ನ ಮನೆಗೆ ಹೊಡೆದುಕೊಂಡು ಹೋಗಲು ಸ್ಥಳಕ್ಕೆ ಬಂದಾಗ ಏಳು ಮೇಕೆಗಳು ರಕ್ತಸಿಕ್ತವಾಗಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಉಳಿದ ಮೂರು ಮೇಕೆಗಳನ್ನ ಚಿರತೆ ಎತ್ತೋಯ್ದಿದ್ದು, ಚಿರತೆ ದಾಳಿ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು ಚಿರತೆ ದಾಳಿಯಿಂದ ಮೇಕೆಗಳು ಸಾವನ್ನಪ್ಪಿವೆ ಎಂದು ಖಚಿತ ಪಡಿಸಿದರು. ಮೇಕೆ ಸಾಕಿಕೊಂಡು ಜೀವನ ನಡೆಸುತ್ತಿದ್ದ ರೈತ ಬಸವರಾಜುಗೆ ಈಗ ಚಿರತೆ ದಾಳಿಯಿಂದ ಮೇಕೆಗಳು ಸಾವನ್ನಪ್ಪಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಸವರಾಜುಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
Key words: 10 goats, killed, leopard, attack, mysore