ಬೆಂಗಳೂರು ಸೆಪ್ಟಂಬರ್,8,2023(www.justkannada.in): ದೇಶದ ಆಸ್ತಿ ಮತ್ತು ಉತ್ಪಾದನೆ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಗ್ರಹ ಆಗುತ್ತಿರುವುದರಿಂದ ಸಾಮಾಜಿಕ , ಆರ್ಥಿಕ ಅಸಮಾನತೆ ಮುಂದುವರೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕಮಲಾ ಹಂಪಾನಾ ಸಾಹಿತ್ಯ ವೇದಿಕೆ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಬೆಳಕು ಬಿತ್ತಿದವರು’, ‘ಪ್ರಾಕೃತಾ ಕಥಾ ಸಾಹಿತ್ಯ’ ಮತ್ತು ‘the journey of life’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸಾಮಾಜಿಕ, ಆರ್ಥಿಕ ತಳಹದಿಯ ಮೇಲೆ ರೂಪುಗೊಳ್ಳದಿದ್ದರೆ ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ ಎಂದಿದ್ದರು. ಹೀಗಾಗಿ ಸ್ವಾತಂತ್ರ್ಯದ ಉದ್ದೇಶ ಈಡೇರಬೇಕಾದರೆ ಸಮಾಜದಲ್ಲಿ ಅವಕಾಶ ಮತ್ತು ಸಂಪತ್ತು ಸಮಾನ ಹಂಚಿಕೆ ಆಗಿ ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಾತಿ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಅಂತರ್ಜಾತಿ ವಿವಾಹ ಜಾತಿ ವಿನಾಶದ ಪ್ರಥಮ ಹೆಜ್ಜೆ. ನಮ್ಮ ಸಂವಿಧಾನ ಕೂಡ ನಮ್ಮದು ಜಾತ್ಯಾತೀತ ಸಮಾಜ ಎಂದು ಹೇಳಿದೆ. ಆ ಕಾಲದಲ್ಲೇ ಅಂತರ್ಜಾತಿ ವಿವಾಹವಾಗಿ ತಮ್ಮ ಮೂವರೂ ಮಕ್ಕಳನ್ನು ಅಂತರ್ಜಾತಿ ವಿವಾಹ ಮಾಡಿರುವ ಹಂಪ ನಾಗರಾಜಯ್ಯ ಮತ್ತು ಕಮಲಾ ಹಂಪನ ಅವರು ನಿಜಕ್ಕೂ ಆದರ್ಶ ದಂಪತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ ಯಾವುದಿದ್ದರೂ ನಾವು ಅಂತಿಮವಾಗಿ ಮನುಷ್ಯರಾಗಬೇಕು. ಮನುಷ್ಯ ಮನುಷ್ಯ ಪ್ರೀತಿಸುವುದೇ ಧರ್ಮ. ದ್ವೇಷಿಸುವುದು ಅಧರ್ಮ. ಆದರೆ ಇಂದು ದ್ವೇಷವನ್ನು ಆರಾಧಿಸುವ ಸಮಾಜವನ್ನು ನಿರ್ಮಿಸುವ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಪ್ರಜ್ಞಾವಂತರಾದ ನಾವೆಲ್ಲರೂ ತಡೆ ಹಾಕಬೇಕು ಎಂದು ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದರು.
ಹಂಪಾ ನಾಗರಜಯ್ಯ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೃತಿಗಳ ಕುರಿತು ಮಾತನಾಡಿದರು. ಲೇಖಕ ಜಿ.ಎನ್.ಮೋಹನ್ ಮತ್ತು ಕಮಲಾ ಹಂಪನಾ ವೇದಿಕೆಯಲ್ಲಿದ್ದರು.
Key words: Equitable- distribution – production – equal -social construction-CM Siddaramaiah