ಮೈಸೂರು, ಸೆಪ್ಟೆಂಬರ್ 09, 2020 (www.justkannada.in): ಮೈಸೂರು ವಿಶ್ವವಿದ್ಯಾನಿಲಯ, ಉನ್ನತ ಭಾರತ ಅಭಿಯಾನ ಯುಬಿಎ ವಿಭಾಗ, ಸಮಾಜಕಾರ್ಯ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಆದಿವಾಸಿ ಸಮನ್ವಯ ಮಂಚ್, ರಾಜ್ಯ ಮೂಲ ಆದಿವಾಸಿ ವೇದಿಕೆ ಸಹಯೋಗದಲ್ಲಿ ‘ಅರಣ್ಯ ಆಧರಿತ ಆದಿವಾಸಿಗಳ ಸ್ಥಿತಿಗತಿ: ಎದುರಿಸುತ್ತರುವ ಸಮಸ್ಯೆಗಳು ಅಗತ್ಯವಿರುವ ಸ್ಪಂದನೆ ಕುರಿತು’ ಸಂವಾದ ಕಾರ್ಯಕ್ರಮ ನಡೆಯಿತು.
ವಿಶ್ವಸಂಸ್ಥೆ ಘೋಷಿಸಿರುವ ಆದಿವಾಸಿ ಹಕ್ಕು ಅಧಿಕಾರ ಸ್ಥಾಪನ ದಿವಸ ದಿನಾಚರಣೆ-೨೦೨೦ ಪ್ರಯುಕ್ತ ನಗರದ ವಿಜ್ಞಾನ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೈಸೂರು ವಿವಿ ವ್ಯಾಪ್ತಿಯ ೧೨ ಮೂಲ ಆದಿವಾಸಿಗಳ ಅಭಿವೃದ್ಧಿಗೆ ನೆರವು ನೀಡಲಾಗುವುದು. ವಿವಿ ವತಿಯಿಂದ ಶಿಕ್ಷಣ, ಉದ್ಯೋಗದೊಂದಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಮಾಡಲು ನೆರವು ನೀಡಲಾಗುವುದು ಎಂದು ತಿಳಿಸಿದರು.
ಅನ್ಯಾಯ, ಅಸಮಾನತೆಗೆ ಒಳಗಾಗಿರುವ ಅವರಿಗೆ ಇರುವ ಮೂಲಭೂತ ಹಕ್ಕುಗಳು ಸಮರ್ಪಕವಾಗಿ ತಲುಪುವಂತೆ ಆಗಬೇಕು. ತಮ್ಮ ಕಲೆ ಮತ್ತು ಸಂಸ್ಕೃತಿಯ ಮೂಲಕ ಸಂಘಟಿತರಾಗಿ ಗುರುತಿಸಿಕೊಂಡಿರುವ ಮೂಲ ಆದಿವಾಸಿಗಳು ಅನ್ಯಾಯವನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ಮಾತನಾಡಿ, ಆದಿವಾಸಿಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ತೆರೆಯುವ ಅಗತ್ಯವಿದೆ. ವಿವಿಗಳು ಮತ್ತು ಆದಿವಾಸಿಗಳ ಕುರಿತು ಅಧ್ಯಯನ ನಡೆಸುವ ವಿಭಾಗಗಳು ಮತ್ತಷ್ಟು ಕ್ರಿಯಾಶೀಲರಾಗಬೇಕು ಎಂದರು.
ಆದಿವಾಸಿ ಮುಖಂಡ ರಾಮನಗರದ ಮಹದೇವಯ್ಯ ಮಾತನಾಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಚಂದ್ರಮೌಳಿ, ಆದಿವಾಸಿ ಹಕ್ಕು-ಅಧಿಕಾರ ಸ್ಥಾಪನಾ ದಿವಸ ದಿನಾಚರಣೆಯ ಕರಪತ್ರ ಬಿಡುಗಡೆಗೊಳಿಸಲಾಯಿತು. ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ಕೆ.ಎನ್.ವಿಠಲ್ ಇದ್ದರು.