ಮೈಸೂರು,ಡಿ,11,2019(www.justkannada.in): ಸಾವಯವ ಕೃಷಿ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಹಾಗೂ ‘ಆರೋಗ್ಯವಂತ ಜನರಿಗಾಗಿ ಆರೋಗ್ಯಯುತ ಆಹಾರ’ ನೀಡುವ ಉದ್ದೇಶದಿಂದ ಮೈಸೂರಿನ ಶಾರದಾದೇವಿ ನಗರದಲ್ಲಿ ‘ಪರಿಸರ’ಸಾವಯವ ಆಹಾರ ಮಾರಾಟ ಮಳಿಗೆಯನ್ನು ಸ್ಥಾಪಿಸಲಾಗಿದೆ.
ಈ ಕುರಿತು ಮಾತನಾಡಿದ ಪರಿಸರ ಆರ್ಗ್ಯಾನಿಕ್ಸ್ ಎ.ಎಸ್.ಮೇಘಾ ಕಾಡನಕುಪ್ಪೆ, ಈ ಮಳಿಗೆಯಲ್ಲಿ ಸಿರಿ ಧಾನ್ಯಗಳನ್ನು ಮಾರಾಟ ಮಾಡುವ ಮೂಲಕ ನಾಗರಿಕರು ಆರೋಗ್ಯಯುತ ಜೀವನವನ್ನು ಹೊಂದಲು ಸಹಕರಿಸುವುದು ನಮ್ಮ ಉದ್ದೇಶ. ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಊದಲು, ಬರಗು, ಕೊರಲೆಗಳನ್ನು ಇಲ್ಲಿ ಮಾರಾಟ ಮಾಡಲಾಗುವುದು. ಜತೆಗೆ ಸಾವಯವ ರಾಗಿ ಹಾಗೂ ಅಕ್ಕಿಯೂ ಇದೆ. ಯಾವುದೇ ಬಗೆಯ ರಾಸಾಯನಿಕ ಔಷಧ, ಕ್ರಿಮಿನಾಶಕ ಬಳಕೆಯಾಗದ ಪರಿಶುದ್ಧ ಸಾವಯವ ಕೃಷಿ ಉತ್ಪನ್ನಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಸಿರಿ ಧಾನ್ಯಗಳು ಮಾತ್ರವೇ ಅಲ್ಲದೇ, ದೇಸಿ ತುಪ್ಪ, ಸಾವಯವ ಅಡುಗೆ ಎಣ್ಣೆಗಳು, ಸಾವಯವ ಜೇನಿನ ತುಪ್ಪ, ತಾಜಾ ಉಪ್ಪಿನಕಾಯಿ, ಜೋನಿ ಬೆಲ್ಲ, ಹುಡಿ ಬೆಲ್ಲ, ಬಕೆಟ್ ಬೆಲ್ಲ, ಸಾಂಬಾರ ಪುಡಿಗಳು, ಸಾವಯವ ಔಷಧಗಳು, ಸಾವಯವ ಚಹಾ, ಪಾರಂಪರಿಕ ಪುಸ್ತಕಗಳು ಹಾಗೂ ಕರಕುಶಲ ಸಾಮಗ್ರಿಗಳನ್ನೂ ಇಲ್ಲಿ ಮಾರಾಟ ಮಾಡಲಾಗುವುದು.
ಈ ಮಾರಾಟ ಮಳಿಗೆಯನ್ನು ಡಿಸೆಂಬರ್ 12ರಂದು ಬೆಳಿಗ್ಗೆ 11ಕ್ಕೆ ಶಾಸಕರಾದ ಜಿ.ಟಿ.ದೇವೇಗೌಡ ಅವರು ಉದ್ಘಾಟಿಸುತ್ತಿದ್ದಾರೆ. ಐಸಿಎಸ್‌ಎಸ್‌ಆರ್ ಹಿರಿಯ ಪ್ರಾಧ್ಯಾಪಕಿ ಫೆಲೊ ಹಾಗೂ ಮಾಧ್ಯಮ ತಜ್ಞೆ ಡಾ.ಎನ್.ಉಷಾರಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
Key words: Establishment -Organic Food Sales Shop –Mysore- Inauguration – tomorrow