ಮೈಸೂರು, ಅಕ್ಟೋಬರ್ 03, 2020 (www.justkannada.in): ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಸಂಶೋಧನಾ ಕ್ಷೇತ್ರದ ಸಾಧನೆಗಳನ್ನು ಪರಿಗಣಿಸಿ ಕೇಂದ್ರ ಸರಕಾರ ನಾನಾ ಪ್ರತಿಷ್ಠಿತ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.
ನವದೆಹಲಿಯ ಸಿಎಸ್ಐಆರ್ (ಎಮೆರಿಟಸ್ ಸೈಂಟಿಸ್ಟ್ ಫ್ರಮ್ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್)ಗೆ ರಂಗಪ್ಪ ಅವರು ನೇಮಕವಾಗಿದ್ದಾರೆ. ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಬರುವ ಸಿಎಸ್ಐಆರ್ ನಲ್ಲಿ ವಿಜ್ಞಾನ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ಹಾಗೂ ಈ ನಿಟ್ಟಿನಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತವೆ.
ವಿಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆ ಹಾಗೂ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ರಂಗಪ್ಪ ಅವರನ್ನು ಕೇಂದ್ರ ಸರಕಾರ ಸಿಎಸ್ಐಆರ್’ಗೆ ನೇಮಿಸಿ ಆದೇಶ ಹೊರಡಿಸಿದೆ. ಇಲ್ಲಿ ರಂಗಪ್ಪ ಅವರು ಮತ್ತಷ್ಟು ಹೊಸ ಸಂಶೋಧನೆಗಳನ್ನು ಕೈಗೊಳ್ಳುವ ಜತೆಗೆ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಸಂಶೋಧನಾ ಚಟುವಟಿಕೆಗಳಿಗೆ ಸಾಥ್ ನೀಡಲಿದ್ದಾರೆ.
ಹಲವು ಜವಾಬ್ದಾರಿಗಳು…
ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಲವು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೂ ರಂಗಪ್ಪ ಅವರನ್ನು ನೇಮಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಚಂಡಿಗಢದ ಎಐಐಎಂಎಸ್ (ಪಿಜಿಐಇಎಂಆರ್), ಭುವನೇಶ್ವರದ ಎಐಐಎಂಎಸ್, ಪಂಜಾಬ್ ನ ಬಂಥಿಡಾ, ಗುವಾಹತಿಯ ಎಐಐಎಂಎಸ್ ಹಾಗೂ ಶ್ರೀನಗರದ ಎಐಐಎಂಎಸ್’ಗೆ ರಂಗಪ್ಪ ಅವರನ್ನು ನಾಮನಿರ್ದೇಶನ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.