ಮೈಸೂರು, ಮೇ 11, 2022 (www.justkannada.in) ಪರೀಕ್ಷೆ ಇದ್ದದ್ದು ರಸಾಯನಶಾಸ್ತ್ರ ಅಧ್ಯಾಪಕರು ನೀಡಲು ಮುಂದಾಗಿದ್ದು, ಭೌತಶಾಸ್ತ್ರ ಪ್ರಶ್ನೆಪತ್ರಿಕೆ. ಗಲಿಬಿಲಿಗೊಂಡ ವಿದ್ಯಾರ್ಥಿಗಳು ಪ್ರತಿಭಟಿಸಿದ ನಂತರ ಎಚ್ಚೆತ್ತ ಆಡಳಿತ ಮಂಡಳಿ ಪರೀಕ್ಷೆಯನ್ನೇ ಮುಂದೂಡಿದೆ!
– ಇದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್ ಐಇ) ಸಂಸ್ಥೆ ಮಾಡಿರುವ ಎಡವಟ್ಟು.
ಮೇ 5ರಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಎಂಎಸ್ಸಿ, ಬಿಎಸ್ಸಿ ವಿದ್ಯಾರ್ಥಿಗಳು ಎಂದಿನಂತೆ ಪರೀಕ್ಷೆಗೆ ಹಾಜರಾಗಿದ್ದಾರೆ. ನೋಟಿಸ್ ಬೋರ್ಡ್ನಲ್ಲಿ ಆಡಳಿತ ಮಂಡಳಿ ಹಾಕಿರುವ ಪರೀಕ್ಷಾ ವೇಳಾಪಟ್ಟಿ ಪ್ರಕಾರ ಇದ್ದದ್ದು ರಸಾಯನಶಾಸ್ತ್ರ ವಿಷಯ. ವಿದ್ಯಾರ್ಥಿಗಳು ಅದೇ ವಿಷಯವನ್ನು ಓದಿಕೊಂಡು ಬಂದಿದ್ದರು. ಆದರೆ, ಪ್ರಾಧ್ಯಾಪಕರು ಭೌತಶಾಸ್ತ್ರ ಪ್ರಶ್ನೆಪತ್ರಿಕೆ ನೀಡಲು ಮುಂದಾದಾಗ ಅಚ್ಚರಿಗೊಂಡರು. ಕ್ಷಣಕಾಲ ವಿದ್ಯಾರ್ಥಿಗಳು
ಅದೇ ರೀತಿ ಬಿಎ ವಿದ್ಯಾರ್ಥಿಗಳಿಗೂ ಫೆಡಲಜಿ ಇಂಗ್ಲಿಷ್ ಬದಲು ಭೂಗೋಳಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆ ನೀಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳು “ತಾವು ಓದದ ವಿಷಯವನ್ನು ಬರೆಯುವುದು ಹೇಗೆ? ಎಂದು ವಿರೋಧ ವ್ಯಕ್ತಪಡಿಸಿದಾಗ ಎಚ್ಚೆತ್ತ ಆಡಳಿತ ಮಂಡಳಿ ಪರೀಕ್ಷೆಯನ್ನು ಮುಂದೂಡಿದೆ. ಸಂಸ್ಥೆ ಮಾಡಿದ ಎಡವಟ್ಟಿನಿಂದ 165 ವಿದ್ಯಾರ್ಥಿಗಳು ಇದೀಗ ಮೇ 17ಕ್ಕೆಪರೀಕ್ಷೆಬರೆಯಬೇಕಿದೆ.
ಏನಿದು ಎಡವಟ್ಟು?: ಪ್ರಾದೇಶಿಕ ಸಂಸ್ಥೆ ನೋಟಿಸ್ ಬೋರ್ಡ್ನಲ್ಲಿ ಮೇ 5ರಿಂದ 19ರವರೆಗೆ ಎಂಎಸ್ಸಿ, ಬಿಎಸ್ಸಿ, ಬಿಎ ವಿದ್ಯಾರ್ಥಿಗಳಿಗೆ ಪರೀಕ್ಷನಡೆಸಲು ವೇಳಾಪಟ್ಟಿಯನ್ನು ಅಂಟಿಸಿದೆ. ಅದರಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಿದ್ದಾರೆ. ದಿನಾಂಕ ಅಂತಿಮಗೊಳ್ಳದ ವೇಳಾಪಟ್ಟಿ ಅದಾಗಿರುತ್ತದೆ. ಸಂಸ್ಥೆಯು ಏ.22ರಂದು ಪರೀಕ್ಷಾ ವೇಳಾಪಟ್ಟಿಗೆ ಮೈಸೂರು ವಿವಿಯಿಂದ ಅನುಮತಿ ಪಡೆದುಕೊಂಡಿದೆ. ಆದರೆ, ಸಿಬ್ಬಂದಿಯ ಎಡವನಿಂದ ಫೈನಲ್ ಆಗದ ವೇಳಾಪಟ್ಟಿಯನ್ನು ವಿವಿ ಅನುಮತಿಗೂ ಮುನ್ನವೇ ನೋಟಿಸ್ ಬೋರ್ಡ್ನಲ್ಲಿ ಅಂಟಿಸಿದ್ದೆ ಇಷ್ಟೆಲ್ಲಾ ಎಡವಟ್ಟಿಗೆ ಕಾರಣವಾಗಿದೆ. ಇದು ಅಧ್ಯಾಪಕರ ಗಮನಕ್ಕೂ ಬಂದಿಲ್ಲ. ವಿದ್ಯಾರ್ಥಿಗಳಿಗೂ ಯಾರೂ ಹೇಳಿಲ್ಲ. ಅಂತಿಮವಾಗಿ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಪರೀಕ್ಷೆ ದಿನ ಈ ವಿಷಯ ತಿಳಿದು ಆಡಳಿತ ಮಂಡಳಿ ಪರೀಕ್ಷೆಯನ್ನು ಮುಂದೂಡಿದೆ. ಓದಿದ್ದು ಒಂದು, ಬರೆಯೋದು ಮತ್ತೊಂದು ವಿಷಯ ಎಂದರೆ ಹೇಗಾಗುತ್ತದೆ. ಸು ಮಧ್ಯಾಹ್ನವಾದರೂ ರಸಾಯನಶಾಸ್ತ್ರ ಪರೀಕ್ಷೆ ಮಾಡಿ ಎಂದರೂ ಅಧ್ಯಾಪಕರು ಮಾಡಲಿಲ್ಲ. ಇದನ್ನು ಪ್ರಶ್ನಿಸಿದರೆ ಮೈಸೂರು ವಿಶ್ವವಿದ್ಯಾಲಯದಿಂದ ವೇಳಾಪಟ್ಟಿ ನಮಗೆ ಮೇ 4ರಂದು ಬಂದಿದೆ. ಹಾಗಾಗಿ ಈ ಬದಲಾವಣೆ ಎಂದು ಆಡಳಿತ ಮಂಡಳಿ ಹೇಳುತ್ತದೆ. ಆದರೆ, ಏ.22ರಂದೇ ಮೈವಿವಿ ಪರೀಕ್ಷಾ ವೇಳಾಪಟ್ಟಿಗೆ ಅನುಮತಿ ನೀಡಿದೆ. ಆಡಳಿತ ಮಂಡಳಿ ಮಾಡಿರುವ ಎಡವಟ್ಟಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ ಯಾಕೆ” ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಲು ಕಷ್ಟ: ವೇಳಾಪಟ್ಟಿಯಂತೆ ಮೇ 5ರಿಂದ 19ರವರೆಗೆ ಪರೀಕ್ಷೆ ನಿಗದಿಯಾಗಿದೆ. ಇದೀಗ ಮುಂದೂಡಿರುವ ರಸಾಯನಶಾಸ್ತ್ರ ಪರೀಕ್ಷೆಯನ್ನು ಮೇ 17ಕ್ಕೆ ನಡೆಸಲು ಪ್ರಾದೇಶಿಕ ಶಿಕ್ಷಣ ಸಂಸ್ಥೆ ನಿರ್ಧರಿಸಿದೆ. ಆದರೆ, ಮೇ 16ರಂದು ಭೌತಶಾಸ್ತ್ರ ಪರೀಕ್ಷೆ ಇದೆ. ಈ ಎರಡು ವಿಷಯ ಕ್ಲಿಷ್ಟಕರವಾಗಿದ್ದು, ಪರೀಕ್ಷೆಗೆ ಅಂತರವಿಲ್ಲ. ಹೀಗಾಗಿ ಪರೀಕ್ಷೆಗೆ ಎರಡು ದಿನ ಅಂತರ ಕೊಡಿ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇದು ತಾಂತ್ರಿಕ ಸಮಸ್ಯೆ. ನಮ್ಮ ಸಿಬ್ಬಂದಿ ಮಾಡಿದ ತಪ್ಪಿನಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಆದರೆ, ಇದೀಗ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮೇ 17ಕ್ಕೆ ಮುಂದೂಡಲಾಗಿದೆ. ಪ್ರಮಾದ ಎಸಗಿದ ಸಿಬ್ಬಂದಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ.
– ಪ್ರೊ.ವೈ.ಶ್ರೀಕಾಂತ್, ಪ್ರಾಂಶುಪಾಲರು, ಪ್ರಾದೇಶಿಕ ಶಿಕ್ಷಣ ಸಂಸ್ಥೆ
ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಉಂಟಾಗಿರುವ ವೇಳಾಪಟ್ಟಿ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ವೇಳಾಪಟ್ಟಿಗೆ ಅನುಮತಿ ಕೊಡುವುದರಲ್ಲಿ ಮೈಸೂರು ವಿವಿಯಿಂದ ವಿಳಂಬವಾಗಿಲ್ಲ. ವಿದ್ಯಾರ್ಥಿಗಳು ಈ ಬಗ್ಗೆ ದೂರು ನೀಡಿದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
– ಪ್ರೊ.ಎ.ಪಿ.ಜ್ಞಾನಪ್ರಕಾಶ್, ಕುಲಸಚಿವ (ಪರೀಕ್ಷಾಂಗ), ಮೈಪಿವಿ
-ಕೃಪೆ: ನಾಗರಾಜ ನವೀಮನೆ, ವಿಜಯ ಕರ್ನಾಟಕ