ಮೈಸೂರು: ಮೈಸೂರು ವಿಶ್ವವಿದ್ಯಾಲಯವು 2022ನೇ ಸಾಲಿನ 3 ಮತ್ತು 5ನೇ ಸೆಮಿಸ್ಟರ್ನ (ಸಿಬಿಸಿಎಸ್- ಫ್ರೆಶರ್ಸ್) ಮತ್ತು 1, 3 ಹಾಗೂ 5ನೇ ಸೆಮಿಸ್ಟರ್ (ಸಿಬಿಸಿಎಸ್-ಪುನಾವರ್ತಿತ ಹಾಗೂ ಪುನಾವರ್ತಿತ ಅಲ್ಲದ) ಪದವಿ ಪರೀಕ್ಷೆ ನಡೆಸಲು ಫೆ.22ರಿಂದ ದಿನಾಂಕ ನಿಗದಿಪಡಿಸಿ ಪ್ರಕಟಣೆ ಹೊರಡಿಸಿದೆ.
ಮೇಲ್ಕಂಡ ಸೆಮಿಸ್ಟರ್ನ ಪದವಿ ಪರೀಕ್ಷೆಗಳಾದ ಬಿಎ, ಬಿಎಸ್ಸಿ, ಬಿಪಿಎ, ಬಿಎ (ಫೈನ್ ಆರ್ಟ್ಸ್), ಬಿವಿಎ (ವಿಶ್ಯೂಲ್ ಆರ್ಟ್ಸ್)/ಬಿಎಫ್ಎ, ಕಾವಾ, ಬಿಕಾಂ, ಬಿಬಿಎಂ/ಬಿಬಿಎ, ಬಿಎಸ್ಡಬ್ಲ್ಯೂ, ಬಿಬಿಎ (ಟಿ ಅಂಡ್ ಟಿ), ಬಿಬಿಎ (ಟಿ ಅಂಡ್ ಎಚ್), ಬಿಟಿಎಚ್/ಬಿಬಿಎ (ಟಿಎಚ್ಎಂ-ಟಿಟಿಎಂ), ಬಿಎಸ್ಸಿ (ವಾಕ್ ಮತ್ತು ಶ್ರವಣ), ಬಿಎಸ್ಸಿಇಡಿ (ಎಚ್ ಅಂಡ್ ಐ) ಮತ್ತು ಬಿಸಿಎ ಪರೀಕ್ಷೆಗಳನ್ನು ಫೆ.22ರಿಂದ ಪ್ರಾರಂಭ ಮಾಡಲಾಗುತ್ತದೆ. ಜ.28 ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಕಾಲೇಜಿಗೆ ಸಲ್ಲಿಸಬೇಕು. 1ನೇ ಸೆಮಿಸ್ಟರ್ ಕೋರ್ಸ್ಗಳು ರಾಷ್ಟ್ರೀಯ ಶಿಕ್ಷಣ ನೀತಿಗೆ ಒಳಪಡುವುದರಿಂದ ಇದರ ಪರೀಕ್ಷಾ ಅಧಿಸೂಚನೆಯನ್ನು ಮುಂದಿನ ದಿನಗಳಲ್ಲಿ ಹೊರಡಿಸಲಾಗುವುದು ಎಂದು ಕುಲಸಚಿವರು (ಪರೀಕ್ಷಾಂಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘‘ಪ್ರಸ್ತುತ ಮೈಸೂರು ವಿವಿಯಲ್ಲಿ ಓದುತ್ತಿರುವ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಹಾಗೂ 3ರಿಂದ 6 ವರ್ಷವಾದರೂ ಪದವಿ ಪರೀಕ್ಷೆ ಪಾಸು ಮಾಡದ 1, 3, 5ನೇ ಸೆಮಿಸ್ಟರ್ ಹಳೆ ವಿದ್ಯಾರ್ಥಿಗಳಿಗೆ ಫೆ.22ರಿಂದ ಪರೀಕ್ಷೆ ಆರಂಭಿಸಲಾಗುವುದು. ಹಳೆ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕುಲಸಚಿವ (ಪರೀಕ್ಷಾಂಗ) ಎ.ಪಿ.ಜ್ಞಾನ ಪ್ರಕಾಶ್ ತಿಳಿಸಿದ್ದಾರೆ.