EXCLUSIVE : ದಸರ ಆಚರಣೆ : ಸದ್ಯದಲ್ಲೇ ಮೈಸೂರಿಗೆ ಆಗಮಿಸಲಿರುವ ಕೇಂದ್ರ ತಂಡ .

 

ಮೈಸೂರು, ಅ.07, 2020 : (www.justkannada.in news) : ದಿನದಿಂದ ದಿನಕ್ಕೆ ಕರೋನಾ ಸೋಂಕು ಮೈಸೂರಲ್ಲಿ ಉಲ್ಭಣಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವ ಆಚರಣೆ ಇದೀಗ ತೂಗೂಯ್ಯಾಲೆಯಲ್ಲಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಕೇಂದ್ರ ಸರಕಾರ ಸದ್ಯದಲ್ಲೇ ತಂಡವೊಂದನ್ನು ಮೈಸೂರಿಗೆ ಕಳುಹಿಸಲಿದ್ದು, ತಂಡ ನೀಡುವ ವರದಿ ಆಧಾರದ ಮೇಲೆ ದಸರ ಆಚರಣೆ ರೂಪುರೇಷೆ ಅವಲಂಬಿತವಾಗಿದೆ.

ಕಳೆದ ಕೆಲ ವಾರಗಳಿಂದ ಮೈಸೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉಲ್ಭಣಿಸುತ್ತಿದ್ದು, ಮೃತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುವ ನಾಡ ಹಬ್ಬ ದಸರ ಮಹೋತ್ಸವ ಆಚರಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ,ಸೋಮಶೇಖರ್, ಎರಡು ಸಾವಿರ ಜನರ ಸಮ್ಮುಖದಲ್ಲಿ ದಸರ ಆಚರಣೆಗೆ ಒಲವು ತೋರಿದ್ದು, ಈ ಸಂಬಂಧ ಸರಕಾರದ ಅನುಮತಿ ಕೇಳಿದ್ದಾರೆ. ಆದರೆ ಇದಕ್ಕೆ ಬಿಜಪಿಯಲ್ಲೇ ಅಪಸ್ವರ ಕೇಳಿ ಬಂದಿದೆ. ಸಚಿವ ಡಾ.ಕೆ.ಸುಧಾಕರ್, ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಸಾವಿರಾರು ಜನರ ಸಮ್ಮುಖದಲ್ಲಿ ದಸರ ಆಚರಣೆಗೆ ಬಹಿರಂಗವಾಗಿಯೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಸುಧಾಕರ್ , ಕೇವಲ 50 ಜನರ ಸಮ್ಮುಖದಲ್ಲಿ ದಸರ ನಡೆಯಲಿ, ಹೆಚ್ಚು ಜನ ಸೇರಿದಷ್ಟು ಸಮಸ್ಯೆಯೆ. ಇದಕ್ಕೆ ಇತ್ತೀಚೆಗೆ ಕೇರಳದಲ್ಲಿ ಒಣಂ ಆಚರಣೆಯಿಂದ ಉಂಟಾದ ಸಮಸ್ಯೆಗಳ ಬಗ್ಗೆ ಬೊಟ್ಟು ಮಾಡಿ ಎಚ್ಚರಿಸಿದ್ದಾರೆ. ವಿಶ್ವನಾಥ್ ಒಂದು ಹೆಜ್ಜೆ ಮುಂದೆ ಹೋಗಿ, ನೀವೆನೂ ಜಂಬೂ ಸವಾರಿಯೇ ಮಾಡ್ತಿರೋ ಇಲ್ಲಾ ಬಂಬೂ ಸವಾರಿ ಮಾಡ್ತೀರೋ…’ ಎಂದು ಜಿಲ್ಲಾಡಳಿತಕ್ಕೆ ತಿರುಗೇಟು ನೀಡಿದ್ದಾರೆ.

jk-logo-justkannada-logo

ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿಯೇ ಗಮನಿಸುತ್ತಿರುವ ಕೇಂದ್ರ ಸರಕಾರ ತಂಡವೊಂದನ್ನು ಮೈಸೂರಿಗೆ ತೆರಳಲು ಸೂಚಿಸಿದ್ದು, ಅದು ನೀಡುವ ವರದಿ ಆಧಾರದ ಮೇಲೆ ದಸರ ಆಚರಣೆ ಯಾವ ರೀತಿ ಇರಬೇಕು ಎಂಬುದು ನಿರ್ಧಾರವಾಗಲಿದೆ.
ಸದ್ಯದಲ್ಲೇ ಮೈಸೂರಿಗೆ ಆಗಮಿಸುವ ಈ ತಂಡ ದಸರ ಮಹೋತ್ಸವ ನಡೆಯುವ ಚಾಮುಂಡಿಬೆಟ್ಟ, ಅರಮನೆ ಆವರಣಗಳಿಗೆ ತೆರಳಿ ಪೂರ್ವಸಿದ್ಧತೆ ಬಗ್ಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮಾಹಿತಿ ಪಡೆಯಲಿದೆ ಎಂದು ಮೂಲಗಳು ‘ಜಸ್ಟ್ ಕನ್ನಡ’ಗೆ ಮಾಹಿತಿ ನೀಡಿವೆ.

ಅರಮನೆ ಆಚರಣೆ ಖಾಸಗಿ :

 Mysore-dasara-festival-corona-pandemic-threat-central-team-visits-Mysore

ಕರೋನಾ ಹಿನ್ನೆಲೆಯಲ್ಲಿ ಈ ವರ್ಷ ಮೈಸೂರು ದಸರ ಮಹೋತ್ಸವ ಆಚರಣೆ ಅರಮನೆಯಲ್ಲಿ ತೀರ ಖಾಸಗಿಯಾಗಿ ನಡೆಯಲಿದೆ. ಮನೆಯವರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ 9 ದಿನಗಳ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಕುಟುಂಬದವರು ಸೇರಿದಂತೆ ಸಾರ್ವಜನಿಕರ್ಯಾರಿಗೂ ಈ ವೇಳೆ ಪ್ರವೇಶವಿರದು. ಇದೊಂದು ಸಂಪೂರ್ಣ ಖಾಸಗಿ ಕಾರ್ಯಕ್ರವಾಗಿರಲಿದೆ  ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಶನಿವಾರ  ಮತ್ತೆ ಸಚಿವದ್ವಯರ ಸಭೆ :

ದಸರ ಮಹೋತ್ಸವ ಆಚರಣೆ ನಿರ್ಧಾರ ಇದೀಗ ಕೇಂದ್ರದ ಅಂಗಳದಲ್ಲಿರುವ ಕಾರಣ, ಇದೇ ಶನಿವಾರ ಮತ್ತೆ ಮೈಸೂರಲ್ಲಿ ಸಚಿವದ್ವಯರ ಸಭೆ ನಡೆಯಲಿದೆ.

mysore-dasara-gajapade-welcome-violation-covid-rule
ಸೋಮವಾರ ವಷ್ಟೆ ಸಚಿವ ಡಾ.ಕೆ. ಸುಧಾಕರ್ ಮೈಸೂರಿಗೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದ್ದರು. ಕೋವಿಡ್ ಸೋಂಕು ಉಲ್ಭಣಿಸುತ್ತಿರುವ ಕಾರಣ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸಚಿವರು ತಾಕೀತು ಮಾಡಿದ್ದರು. ಇಂದು ಆರೋಗ್ಯ ಸಚಿವ ಶ್ರೀರಾಮುಲು ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಇದೀಗ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಶನಿವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳ ‘ಜಸ್ಟ್ ಕನ್ನಡ’ ಗೆ ಮಾಹಿತಿ ನೀಡಿವೆ.

 

key words : Mysore-dasara-festival-corona-pandemic-threat-central-team-visits-Mysore