ಮೋದಿ ಸರ್ಕಾರ ನಿರೀಕ್ಷೆ ಅಪಾರ

ಬೆಂಗಳೂರು:ಮೇ-30: ನರೇಂದ್ರ ಮೋದಿ ಅವರ ಅಭೂತಪೂರ್ವ ಜಯಭೇರಿಗೆ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚಿನ ಸಂಸದರನ್ನು ಗೆಲ್ಲಿಸಿರುವುದರಿಂದ ರಾಜ್ಯದ ಜನರ ನಿರೀಕ್ಷೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಕೇಂದ್ರದಲ್ಲಿ ಸರ್ಕಾರ ರಚನೆಗೆ 25 ಸಂಸದರನ್ನು ಕೊಡುಗೆಯಾಗಿ ನೀಡಿರುವ ಕಾರಣ ಸಹಜವಾಗಿಯೇ ಕೃಷಿ, ನೀರಾವರಿ, ಪ್ರವಾಸೋದ್ಯಮ, ಕೈಗಾರಿಕೆ, ವಸತಿ ಇನ್ನಿತರ ರಂಗಗಳಲ್ಲಿ ಅಭಿವೃದ್ದಿಗೆ ಸಂಬಂಧಿಸಿದಂತೆ ಅಗಾಧ ನಿರೀಕ್ಷೆ ಹೊಂದಲಾಗಿದೆ.

ಹಿಂದೆಲ್ಲ ಕೇಂದ್ರ ಸರ್ಕಾರಗಳು ರಾಜ್ಯದ ಬಗ್ಗೆ ‘ಮಲತಾಯಿ’ ಧೋರಣೆ ತೋರಿದ್ದೇ ಹೆಚ್ಚು, ಮೋದಿ ಸರ್ಕಾರ ಕಳೆದ ಬಾರಿ ಆ ಆರೋಪ ಬಾರದಂತೆ ನೋಡಿಕೊಂಡಿದ್ದರಿಂದ ಈಗ ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ.

ರಾಜ್ಯ ಸರ್ಕಾರ ಕೇಂದ್ರದಿಂದ ಸಿಗುವ ಯೋಜನೆಗಳ ಜತೆಗೆ ಒಂದಷ್ಟು ಶಾಶ್ವತ ಯೋಜನೆಗಳ ಮೂಲಕ ಅಭಿವೃದ್ಧಿಯ ಕನಸನ್ನು ಕಾಣುತ್ತಿದೆ. ರಾಜ್ಯ ಹಿಂದೆಂದೂ ಕಾಣದಂತಹ ತೀವ್ರ ಬರದಿಂದ ಬಳಲಿದೆ. ಕುಡಿಯುವ ನೀರು, ಮೇವಿನ ಕೊರತೆ ಇದೆ. ಕೃಷಿ ಸಂಪೂರ್ಣ ಹಾಳಾಗಿದೆ. ಆದ್ದರಿಂದ ಕೃಷಿಕರಿಗೆ ಇನ್​ಪುಟ್ ಸಬ್ಸಿಡಿ ನೀಡುವುದಕ್ಕೆ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ನೆರವು ತುರ್ತಾಗಿ ಸಿಗಬೇಕಾಗಿದೆ. ರಾಜ್ಯದಲ್ಲಿ ಕೃಷಿಕರು ಎದುರು ನೋಡುತ್ತಿರುವುದು ಸ್ವಾಮಿನಾಥನ್ ವರದಿಯ ಆಧಾರದಲ್ಲಿ ಬೆಂಬಲ ಬೆಲೆ. ಸಿ2ಫ್ಲಸ್50 ಆಧಾರದಲ್ಲಿ, ವೆಚ್ಚದ ದುಪ್ಪಟ್ಟು ಹಾಗೂ ಲಾಭದ ಆಧಾರದಲ್ಲಿ ಬೆಂಬಲ ಬೆಲೆ ಸಿಗುವಂತಾಗಬೇಕು. ಉದಾಹರಣೆಗೆ ಹೇಳುವುದಾದರೆ ತೊಗರಿಗೆ ಪ್ರತಿ ಕ್ವಿಂಟಾಲ್ 5,540 ರೂ. ಇದ್ದು, ಅದು 6,918 ರೂ. ಸಿಗುತ್ತದೆ. ಜತೆಗೆ ಖರೀದಿ ಕೇಂದ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ನೆರವು ನೀಡಬೇಕಾಗಿದೆ. ಬೆಲೆ ಕುಸಿತವಾದ ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಅನುದಾನದ ನಿರೀಕ್ಷೆ ರೈತರದ್ದಾಗಿದೆ. ಕೇಂದ್ರ ಸರ್ಕಾರದ ಫಸಲ್ ಬೀಮಾ ವಿಮೆ ಯೋಜನೆ ಖಾಸಗಿ ಕಂಪನಿಗಳಿಗೆ ಅನುಕೂಲ ವಾಗುತ್ತಿದೆ, ಬಿಹಾರದಲ್ಲಿ ನಿತೀಶ್​ಕುಮಾರ್ ಸರ್ಕಾರ ಪ್ರತ್ಯೇಕ ವಿಮಾ ಯೋಜನೆ ತಂದಿರುವುದರಿಂದ ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂಬ ಒತ್ತಾಯ ರಾಜ್ಯದ ರೈತರಲ್ಲಿದೆ.

ಮೂಲಸೌಕರ್ಯಕ್ಕೆ ನೆರವಿನ ನಿರೀಕ್ಷೆ

ಶಿಕ್ಷಣ ಕ್ಷೇತ್ರದ ಮೂಲಸೌಕರ್ಯಕ್ಕಾಗಿ 2 ಸಾವಿರ ಕೋಟಿ ರೂ. ನೆರವು ಕೇಳಲು ರಾಜ್ಯ ಸರ್ಕಾರ ಸಿದ್ಧವಾಗುತ್ತಿದೆ. ರಾಜ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಅರಣ್ಯ ವಾಸಿಗಳಿದ್ದು, ಇವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಿಲ್ಲಬೇಕಾದರೆ ಕಾಯ್ದೆಗೆ ತಿದ್ದುಪಡಿ ಅಗತ್ಯ. ಕೇರಳ ಹಾಗೂ ಗೋವಾ ರೀತಿ ಪರ್ಯಾಯ ಆದಾಯದ ಮೂಲವಾಗಿ ಪ್ರವಾಸೋದ್ಯಮ ಅಭಿವೃದ್ದಿ ಮಾಡಬೇಕಾಗಿದೆ. ಮೋದಿ ಮೊದಲ ಅವಧಿಯಲ್ಲಿ ಸರ್ವರಿಗೂ ಸೂರು ಕಾರ್ಯಕ್ರಮ ರೂಪಿಸಿದ್ದರು. ಅದರ ಮುಂದುವರಿದ ಭಾಗವಾಗಿ ರಾಜ್ಯದ 20 ಲಕ್ಷ ವಸತಿ ರಹಿತರಿಗೆ ಮನೆ ನಿರ್ವಣಕ್ಕೆ ಆದ್ಯತೆ ನೀಡಬೇಕಾಗಿದೆ. ರಸ್ತೆ, ರೈಲ್ವೆ, ಸೇತುವೆ ಹೀಗೆ ವಿವಿಧ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ನೆರವು ಸಿಗಬಹುದೆಂಬುದು ರಾಜ್ಯ ಸರ್ಕಾರದ ನಿರೀಕ್ಷೆ.

ಪಾಲು ಹೆಚ್ಚಳ: ಕೇಂದ್ರ ಗ್ರಿಡ್​ನಿಂದ ರಾಜ್ಯಕ್ಕೆ 1,900 ಮೆ.ವ್ಯಾ. ವಿದ್ಯುತ್ ಮಂಜೂರಾಗಿದೆ. ಈ ಪ್ರಮಾಣವನ್ನು 2,500 ಮೆ.ವ್ಯಾ.ಗೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಮೋದಿ ಸರ್ಕಾರ ವಾದರೂ ಸ್ಪಂದಿಸುವುದೇ ಎಂಬುದೀಗ ಪ್ರಶ್ನೆ.

ಬೆಂಗಳೂರು ಅಭಿವೃದ್ಧಿಗೆ ಬೇಕಿದೆ ನೆರವು

ಬೆಂಗಳೂರಿನಲ್ಲಿ ಮೂಲಸೌಕರ್ಯಕ್ಕೆ ಕೇಂದ್ರದಿಂದ ಎಷ್ಟು ನೆರವು ಸಿಕ್ಕಲಿದೆ ಎಂಬ ಕುತೂಹಲವಿದೆ. ಬೆಂಗಳೂರಿಗೆ ಬ್ರಾಂಡ್​ನೇಮ್ ತಂದುಕೊಟ್ಟ ಮಾಹಿತಿ ತಂತ್ರಜ್ಞಾನ ಈಗ ಸಂಕಷ್ಟದಲ್ಲಿದ್ದು, ಅನೇಕ ಕಂಪನಿಗಳು ಮುಚ್ಚುತ್ತಿವೆ. ಕೇಂದ್ರದ ನೆರವು ಇಲ್ಲದೇ ಈ ಯೋಜನೆ ಬೆಳೆಯಲಾಗದು.

ನೀರಾವರಿ ನಿರೀಕ್ಷೆ

ರಾಜ್ಯ ಸರ್ಕಾರ ನೀರಾವರಿಗೆ ಒದಗಿಸುತ್ತಿರುವ ಅನುದಾನ ಸಾಲುತ್ತಿಲ್ಲ. ಕೃಷಿ ಮಾಡದ ಭೂಮಿಯನ್ನು ಕೃಷಿಗೆ ಒಗ್ಗಿಸಲು ನೀರಾವರಿ ಯೋಜನೆಗೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಇನ್ನೂ 500 ಟಿಎಂಸಿ ನೀರು ಬಳಕೆಗೆ ಅವಕಾಶ ಇದೆ. ಯುಕೆಪಿಯ ಮೂರನೇ ಹಂತದ ಯೋಜನೆಯನ್ನು ಕೇಂದ್ರದ ಯೋಜನೆಯನ್ನಾಗಿ ಪರಿಗಣಿಸಿ ಹೆಚ್ಚಿನ ಪ್ರಮಾಣದ ನೆರವಿನ ಹಸ್ತ ಚಾಚಿದರೆ ಮಾತ್ರ ಬೇಗ ಮುಗಿಯಲು ಸಾಧ್ಯ. ಮಹದಾಯಿ, ಮೇಕೆದಾಟು ಸೇರಿ ಅನೇಕ ಯೋಜನೆಗಳಿಗೆ ಕೇಂದ್ರದ ಬೆಂಬಲದ ಅಗತ್ಯವಿದೆ. ನದಿಗಳ ಜೋಡಣೆಗೂ ಆದ್ಯತೆ ನೀಡಿದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ.

ಕೈಗಾರಿಕೆಗಳ ಸ್ಥಾಪನೆಗೆ ಒತ್ತು

ದೇಶದಂತೆ ರಾಜ್ಯದಲ್ಲಿಯೂ ನಿರುದ್ಯೋಗ ಸಮಸ್ಯೆ ಅಗಾಧ ಪ್ರಮಾಣದಲ್ಲಿದೆ. ಹಾವೇರಿ, ಗದಗ, ರಾಯಚೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರ, ಮಂಡ್ಯ, ಕೊಡಗು, ಚಾಮರಾಜನಗರಗಳಲ್ಲಿ ದೊಡ್ಡ ಕೈಗಾರಿಕೆಗಳಿಲ್ಲ. ಆ ಜಿಲ್ಲೆಗಳಿಗೆ ಕೇಂದ್ರದ ನೆರವಿನಲ್ಲಿ ದೊಡ್ಡ ಕೈಗಾರಿಕೆಗಳು ಬಂದರೆ ಎಂಎಸ್​ಎಂಇಗಳು ಬೆಳೆದು ನಿರುದ್ಯೋಗ ನಿವಾರಣೆಯ ಜತೆಗೆ ಆರ್ಥಿಕತೆಯೂ ಬೆಳೆಯುತ್ತದೆ.

ನರೇಂದ್ರ ಮೋದಿಗೆ ಉಜ್ಜಯಿನಿ ಜಗದ್ಗುರುಗಳ ಶುಭ ಹಾರೈಕೆ

ಉಜ್ಜಯಿನಿ: ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿ, 2ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೋದಿ ಅವರಿಗೆ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಶುಭ ಹಾರೈಸಿದ್ದಾರೆ. ಪಾರದರ್ಶಕ, ಸತ್ವಪೂರ್ಣ ಆಡಳಿತ ಜಾರಿಗೊಳಿಸಿ ವಿಶ್ವ ಭೂಪಟದಲ್ಲಿ ಭಾರತ ರಾರಾಜಿಸುವಂತೆ ಮಾಡುವುದರೊಂದಿಗೆ ಇಡೀ ವಿಶ್ವ ತನ್ನತ್ತ ಸೆಳೆಯುವಂತಹ ಶಕ್ತಿಯನ್ನು ಮೋದಿ ಅವರಿಗೆ ಭಗವಂತ ಅನುಗ್ರಹಿಸಲಿ ಎಂದು ಹಾರೈಸಿದ್ದಾರೆ.

ಪ್ರಮಾಣವಚನಕ್ಕೆ ಮಠಾಧಿಪತಿಗಳಿಗೆ ಆಹ್ವಾನ

ಉಡುಪಿ: ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನ ಮಂತ್ರಿಯಾಗಿ ಗುರುವಾರ ಸಾಯಂಕಾಲ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. 7 ಸಾವಿರ ಜನರಿಗೆ ಆಮಂತ್ರಣ ನೀಡಲಾಗಿದ್ದು, ವಿಶ್ವ ಹಿಂದು ಪರಿಷತ್​ನ ಧರ್ಮಸಂಸತ್​ನಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಪೀಠಾಧಿಪತಿಗಳಿಗೂ ಆಹ್ವಾನ ಕಳುಹಿಸಲಾಗಿದೆ. ಪೇಜಾವರ ಶ್ರೀಗಳು ವಿಹಿಂಪ ಗೌರವಾಧ್ಯಕ್ಷರಾಗಿದ್ದು, ಪೇಜಾವರ ಮಠದ ದೆಹಲಿ ಶಾಖೆಗೆ ಆಹ್ವಾನಪತ್ರ ಮತ್ತು ಪ್ರವೇಶಪತ್ರ ತಲುಪಿಸಲಾಗಿದೆ. ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಬೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರಿಗೂ ಬಿಜೆಪಿ ಕೇಂದ್ರ ಕಚೇರಿಯಿಂದ ಆಹ್ವಾನ ಬಂದಿದೆ.

ಕೃಪೆ:ವಿಜಯವಾಣಿ

ಮೋದಿ ಸರ್ಕಾರ ನಿರೀಕ್ಷೆ ಅಪಾರ
expecting-more-from-narendra-modi-government