ನಕಲಿ ದಾಖಲೆ ಸೃಷ್ಟಿಸಿ ಖಾತೆ: ಅಧಿಕಾರಿಗಳೇ ಶಾಮೀಲು- RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಆರೋಪ

ಮೈಸೂರು,ಜುಲೈ,3,2024 (www.justkannada.in):  ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಾಂತರ ರೂ ಬೆಲೆ ಬಾಳುವ ಆಸ್ತಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ  ಬಂದಿದೆ ಎಂದು ಆರ್ ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರ ಆರೋಪ ಮಾಡಿದರು.

ದಾಖಲೆಗಳನ್ನ ಮಾಹಿತಿ ಹಕ್ಕಿನ ಮುಖಾಂತರ ಪಡೆದ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಬಿಡುಗಡೆ ಮಾಡಿದ್ದು, ಅಕ್ರಮವಾಗಿ ಖಾತೆ ಮಾಡಿಕೊಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮಲಿನ‌ ನೀರು ಶುದ್ದೀಕರಣ ಘಟಕ ಸ್ಥಾಪಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಕೆಸರೆ ಭಾಗದ ಸ ನಂ.501/1 ರಿಂದ 501/8 ರವರೆಗೆ ಹಲವು ಜಮೀನುಗಳನ್ನ 1997-98 ನೇ ಸಾಲಿನಲ್ಲಿ LAQ CR no.230/96-97 ರ ಅನ್ವಯದಂತೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸದರಿ ಜಮೀನುಗಳ ಮಾಲೀಕರಿಗೆ ಪರಿಹಾರವನ್ನೂ ಸಹ ನೀಡಲಾಗಿದೆ. ಸ್ವಾಧೀನ ಪಡಿಸಿಕೊಳ್ಳಲಾದ ಜಮೀನಿನ ಪೈಕಿ ಸರ್ವೆ ನಂ.501/7 ರಲ್ಲಿ ಪೋಡಿ ಜಮೀನು ಸೇರಿದಂತೆ ಸುಮಾರು ಒಂದು ಎಕರೆಗೂ ಹೆಚ್ಚು ಪ್ರದೇಶದ ಜಮೀನನ್ನ ಖಾಸಗಿ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಸರ್ವೆ ನಂ.501/7 ಕ್ಕೆ  501/7b ಎಂದು ನಕಲಿ ದಾಖಲೆಗಳನ್ನ ಸೃಷ್ಟಿಸಲಾಗಿದೆ.  ಇಲ್ಲದಿರುವ ಸರ್ವೆ ನಂ ಸೃಷ್ಟಿಸಿದ ವಲಯ ಕಚೇರಿ 7 ಅಧಿಕಾರಿಗಳು ಭೂಗಳ್ಳರ ಜೊತೆ ಶಾಮೀಲಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.  ತಮ್ಮ ಅಕ್ರಮವನ್ನ ಮುಚ್ಚಿಹಾಕುವ ಉದ್ದೇಶದಿಂದ ಸರ್ವೆ ನಂ 504/3 ರ ಜಮೀನಿನಲ್ಲಿ ಬೆಳೆದಿರುವ ತೆಂಗಿನ ಮರಗಳನ್ನ ಖಾಸಗಿ ವ್ಯಕ್ತಿಗಳು ಕಟಾವ್ ಮಾಡಿದ್ದಾರೆಂದು ಆರೋಪಿಸಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಮಾಡಿಸಲಾಗಿದೆ ಎಂದು RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ತಿಳಿಸಿದ್ದಾರೆ.

Key words: Fake, document, creation, RTI activist, BN Nagendra