ಮೈಸೂರು,ಜುಲೈ,7,2022(www.justkannada.in): ಟಿಪ್ಪು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ನಕಲಿ ಸಂಚಾರಿ ಟಿಕೇಟ್ ಪರೀಕ್ಷಕನನ್ನು ರೈಲ್ವೆಯ ಟಿಕೆಟ್ ಪರೀಕ್ಷಕ ಸಿಬ್ಬಂದಿಯು ಹಿಡಿದಿದ್ದಾರೆ.
ದುಷ್ಕರ್ಮಿಯನ್ನು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ನಿವಾಸಿ ಕರಿಯಪ್ಪ ಎಂಬುವರ ಪುತ್ರ ಮಲ್ಲೇಶ್ ಎಂದು ಗುರುತಿಸಲಾಗಿದೆ. ರೈಲು ಗಾಡಿ ಸಂಖ್ಯೆ 12613 ಮೈಸೂರು-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಟಿಕೆಟ್ ಪರೀಕ್ಷಕ ಉಪ ಮುಖ್ಯಸ್ಥರಾದ ಪಿ.ಚೇತನ್ ರವರು ಎಸಿ ಮೆಕ್ಯಾನಿಕ್ ರವಿ ಅವರೊಂದಿಗೆ, ಅಪರಾಧಿಯು ರೈಲಿನಲ್ಲಿ ನಕಲಿ ರೈಲ್ವೆ ಟ್ಯಾಗ್ ಮತ್ತು ಅರ್ಧ ಸಮವಸ್ತ್ರ ಧರಿಸಿ ವಾಕಿಟಾಕಿಯೊಂದಿಗೆ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ರೈಲಿನಲ್ಲಿ ಆತನ ಉಪಸ್ಥಿತಿ ಮತ್ತು ಗುರುತಿನ ಬಗ್ಗೆ ವಿಚಾರಿಸಿದಾಗ ಅವನು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ತಕ್ಷಣ ಎಚ್ಚೆತ್ತ ಸಿಬ್ಬಂದಿ ಆತನನ್ನು ಹಿಡಿದು ಮೈಸೂರು ನಿಲ್ದಾಣದ ಟಿಕೆಟ್ ಲಾಬಿಯಲ್ಲಿರುವ ಟಿಕೆಟ್ ಪರೀಕ್ಷಕರ ಉಸ್ತುವಾರಿಯಾದ ಸಿ.ಎಸ್. ಭಾಸ್ಕರ್ ರವರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಆತ ಪ್ರತಿನಿತ್ಯದ ಅಪರಾಧಿಯಾಗಿದ್ದು, ತಾನೊಬ್ಬ ಸಂಚಾರಿ ಟಿಕೆಟ್ ಪರೀಕ್ಷಕ ಎಂದು ಬಿಂಬಿಸಿಕೊಂಡು ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಧರ್ಮಾವರಂ ಮಾರ್ಗಗಳೂ ಸೇರಿದಂತೆ ದೂರ ಪ್ರಯಾಣದ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ರೈಲು ಯಾತ್ರಿಕರನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ದಂಡ ವಿಧಿಸುತ್ತಿದ್ದ ಮತ್ತು ಅಮಾಯಕ ಪ್ರಯಾಣಿಕರಿಂದ ಹಣ ಸಂಗ್ರಹಿಸುತ್ತಿದ್ದ ಎಂದು ತಿಳಿದುಬಂದಿದೆ. ನಂತರ ಅವನನ್ನು ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಕ್ರಿಯೆಯಲ್ಲಿದೆ.
Key words: Fake -traffic -ticket – arrested –mysore-Tipu Super Fast Express.