ಮೈಸೂರು,ಸೆಪ್ಟೆಂಬರ್,22,2020(www.justkannada.in) : ಚಾಮುಂಡಿಬೆಟ್ಟದಲ್ಲಿ ಪಾಳೆಯಗಾರ ಮಾರನಾಯಕರ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ಮೈಸೂರು ನಾಯಕರ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಂಗಳವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಮಾತನಾಡಿ, ಮೈಸೂರಿನ ಮೂಲ ನಿವಾಸಿಗಳಾದ ನಾಯಕರ, ಪಾಳೆಯಗಾರ,ಮಾರನಾಯಕರ ಪುತ್ಥಳಿಯನ್ನು ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಮೈಸೂರಿನ ಮೂಲನಿವಾಸಿಗಳು ನಾವು ನಾಯಕ ಜನಾಂಗದ ಜನರು. ನಮ್ಮ ನಾಯಕ ಕಾರ್ಗಳ್ಳಿ ಮಾರನಾಯಕರು. 13ನೇ ಶತಮಾನದಲ್ಲಿ ಮೈಸೂರು ಪ್ರಾಂತ್ಯದ ಪಾಳೆಯಗಾರಿಕೆ ಮಾಡುತ್ತಿದ್ದು, ಅಂದಿನ ಅರಸರಿಗೆ ಗಂಡು ಸಂತಾನವಿರಲಿಲ್ಲ. ಅವರ ಏಕಮಾತ್ರ ಪುತ್ರಿ ಯುವರಾಣಿ ದೇವಾಜಮ್ಮಣ್ಣಿ ಅವರನ್ನು ವಿವಾಹ ಮಾಡಿಕೊಡಲು ಪಾಳೇಗಾರ ಮಾರನಾಯಕರು ಒತ್ತಾಯಿಸಿದ್ದರು.
ಯದುರಾಯ ಮತ್ತು ಕೃಷ್ಣರಾಯರ ಸಹಾಯದಿಂದ ಮೋಸದಿಂದ ಮಾರನಾಯಕನನ್ನು ಕೊಂದಿದ್ದು ಇತಿಹಾಸದಲ್ಲಿ ಪುಟದಲ್ಲಿದೆ.ಅಲ್ಲಿಂದ ಯದುವಂಶದ ಆಡಳಿತ ಮೈಸೂರಿನಲ್ಲಿ ಪ್ರಾರಂಭವಾಗಿದೆ ಎಂದು ಹೇಳಿದರು.
ಮೈಸೂರಿನ ಮೂಲ ನಿವಾಸಿಗಳ ಪಾಳೇಗಾರ ಮಾರನಾಯಕರ ಇತಿಹಾಸವನ್ನು ಬಚ್ಚಿಡುವಂತಹ ಕೆಲಸ ತುಂಬಾ ವ್ಯವಸ್ಥಿತವಾಗಿದೆ. ಮುಖ್ಯಮಂತ್ರಿಗಳು ಮೈಸೂರು ಭಾಗದ ಮೂಲ ನಿವಾಸಿಗಳಾದ ನಾಯಕ ಜನಾಂಗದ ಐತಿಹಾಸಿಕ ಪುರುಷ ಕಾರ್ಗಳ್ಳಿ ಮಾರನಾಯಕನ ಪುತ್ಥಳಿಯನ್ನು ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿ ಮುಂದಿನ ಪೀಳಿಗೆ ಇತಿಹಾಸವನ್ನು ಕಟ್ಟಿಕೊಡುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ನಾಯಕ ಸಮುದಾಯದ ಮುಖಂಡರಾದ ದ್ಯಾವಪ್ಪನಾಯಕ, ಕಾಟೂರು ದೇವರಾಜು, ವಿನೋದ್ ನಾಗವಾಲ,ಶ್ರೀಧರ ಬೆಟ್ಟ,ಟೆನ್ನಿಸ್ ಗೋಪಿ,ರಮ್ಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
key words : Farmer-Maranayaka-Chamundibetta-Protest-daughter-in-law