ಮೈಸೂರು,ಫೆಬ್ರವರಿ,18,2021(www.justkannada.in): ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೇಶಾದ್ಯಂತ ರೈಲು ರೋಕೋ ಚಳವಳಿ ನಡೆಸುತ್ತಿದ್ದು ಈ ಅಂಗವಾಗಿ ಇಂದು ಮೈಸೂರಿನಲ್ಲಿ ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ರೈತರನ್ನ ಪೊಲೀಸರು ಬಂಧಿಸಿದರು.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲೂ ಅನ್ನದಾತರ ಪ್ರತಿಭಟನೆ ಜೋರಾಗಿದ್ದು, ಮೈಸೂರಿನಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.
ಹಳ್ಳಿಕೆರೆಹುಂಡಿ ಭಾಗ್ಯರಾಜು, ದಲಿತ ಮುಖಂಡರಾದ ಬನ್ನಹಳ್ಳಿ ಸೋಮಣ್ಣ ಅವರ ನೇತೃತ್ವದಲ್ಲಿ ಸುಮಾರು 50 ರಿಂದ 60 ಮಂದಿ ಸೇರಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕೆಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಕಟ್ಟಿರುವ ರೈಲು ರೊಕೊ ಚಳುವಳಿಗೆ ಬೆಂಬಲ ಸೂಚಿಸಿ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿದರು.
ರೈತರನ್ನ ಬಂಧಿಸಿ ಕರೆದೊಯ್ಯಲು ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ರೈತರ ಬಂಧನ ವೇಳೆ ಬಸ್ ಮೇಲಿದ್ದ ಪ್ರಧಾನಿ ಮೋದಿ, ಸಿಎಂ ಬಿಎಸ್ ವೈ ಭಾವಚಿತ್ರ ಕಂಡು ಸಿಡಿಮಿಡಿಗೊಂಡ ರೈತರು, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಭಾವಚಿತ್ರಕ್ಕೆ ಶೂನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಅಲ್ಲಿದ್ದ ಪೊಲೀಸರು ಬಲವಂತವಾಗಿ ರೈತರನ್ನ ವಶಕ್ಕೆ ಪಡೆದು ಸಿಆರ್ ಮೈದಾನಕ್ಕೆ ಕರೆದೊಯ್ದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಾಜ್ಯ ಸಂಘಟನೆ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ವಹಿಸಿಕೊಂಡಿದ್ದರು.
Key words: Farmers- attempt – – railway station –Mysore-Arrest- by police.