ಮೈಸೂರು,ನವೆಂಬರ್,2,2020(www.justkannada.in): ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರು ಡಿಸಿ ಆಫೀಸ್ ಮುಂದಿನ ರಸ್ತೆಯಲ್ಲೇ ಮಲಗಿ ಪ್ರತಿಭಟನೆಗೆ ಮುಂದಾದರು.ಈ ನಡುವೆ ರೈತರು ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದಿದ್ದು ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ತಳ್ಳಾಟ ನಡೆದಿದೆ.
ಈ ಸಮಯದಲ್ಲಿ ಪೊಲೀಸ್ ವಿರುದ್ಧವೇ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ಬಿಡಿ ನಾವು ಡಿಸಿ ಜೊತೆ ಮಾತನಾಡಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ ಇದಕ್ಕೆ ಬಗ್ಗದ ಪೊಲೀಸರು ಯಾವುದೇ ಕಾರಣಕ್ಕೂ ಡಿಸಿ ಆಫೀಸ್ ಒಳಗಡೆ ಬಿಡಲ್ಲ ಎಂದು ವಾದ ಮಾಡಿದರು.
ಈ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ರೈತರ ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಭೇಟಿ ನೀಡಿದರು, ಈ ವೇಳೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಅವರ ಮುಂದೆಯೇ ರೈತರು ವಾಗ್ವಾದಕ್ಕಿಳಿದ ದೃಶ್ಯ ಕಂಡು ಬಂತು. ರೈತರ ಕೊರಳ ಪಟ್ಟಿ ಹಿಡಿದು ಪೊಲೀಸರು ಮಾತನಾಡುತ್ತಾರೆ. ಪೊಲೀಸರು ಮೊದಲು ಕ್ಷಮೆ ಕೇಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಅವರ ಮುಂದೆ ರೈತರು ಒತ್ತಾಯಿಸಿದರು.
Key words: farmers- protest – Mysore – DC office- police