ಮೈಸೂರು,ಡಿಸೆಂಬರ್,07,2020 : ಮೈಸೂರು ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಮೃತಪಟ್ಟರೆ ಅವರ ಮಕ್ಕಳಿಗೆ ಎಫ್ಡಿಎ ಹುದ್ದೆ ನೀಡುವ ನಿಯಮ ಜಾರಿಗೆ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಸೋಮವಾರ ವಿಜ್ಞಾನ ಭವನದಲ್ಲಿ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ 2ನೇ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳಿಗೆ ಅನುಮೋದನೆ ದೊರೆಯಿತು.
ಅನುಕಂಪದ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕ ಹುದ್ದೆ ಮೈಸೂರು ವಿವಿಯ ನೌಕರರು ಮೃತಪಟ್ಟರೆ ಅವರ ಮಕ್ಕಳು ಎಸ್ಎಸ್ಎಲ್ಸಿಗಿಂತ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ್ದರೆ ಈವರೆಗೂ ಕಿರಿಯ ದರ್ಜೆ ಸಹಾಯಕ ಹುದ್ದೆಗಳನ್ನು ನೀಡಲಾಗುತ್ತಿತ್ತು. ಎಸ್ಎಸ್ಎಲ್ಸಿಗಿಂತಲೂ ಕೆಳಗಿದ್ದರೆ ಅಟೆಂಡರ್ ಹುದ್ದೆ ನೀಡಲಾಗುತ್ತಿತ್ತು. ಆದರೆ, ಸರ್ಕಾರದ ತಿದ್ದುಪಡಿಯಿಂದ ಅವರ ವಿದ್ಯಾರ್ಹತೆಗೆ ತಕ್ಕಂತೆ ಅನುಕಂಪದ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕ ಹುದ್ದೆ ನೀಡಬಹುದಾಗಿದೆ. ಈ ನಿಯಮವನ್ನು ಮೈವಿವಿಯಲ್ಲೂ ಜಾರಿಗೆ ತರುವುದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.
ಆದಿವಾಸಿಗಳ ಅಭಿವೃದ್ಧಿಗೆ ಕ್ರಮ
ಆದಿವಾಸಿ ವಿದ್ಯಾರ್ಥಿಗಳ ಅಭಿವೃದ್ಧಿ ದೃಷ್ಟಿಯಿಂದ ಉನ್ನತ ಭಾರತ ಯೋಜನೆ ಮತ್ತು ಸ್ಮಾರ್ಟ್ ವಿಲೇಜ್ ಯೋಜನೆಯಲ್ಲಿ ಮೈಸೂರು ವಿವಿ ದತ್ತು ಪಡೆದಿರುವ ಪಿ.ಜಿ.ಪಾಳ್ಯ, ಮೀಣ್ಯ, ಮಹದೇಶ್ವರಬೆಟ್ಟ ಪೊನ್ನಾಚ್ಚಿ ಹಾಗೂ ಪುತ್ತೂರು ಗ್ರಾಮಗಳಿಂದ ಬರುವ ವಿದ್ಯಾರ್ಥಿಗಲ್ಲಿ ತಲಾ ಒಬ್ಬ ಯುವಕ, ಯುವತಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಸೀಟ್ಗಳನ್ನು ಮೀಸಲಿಡಲು ಅನುಮತಿ ದೊರೆಯಿತು.
ಈ ಯೋಜನೆಯಲ್ಲಿ ಸೋಲಿಗರು, ಆದಿವಾಸಿಗಳು ಎಂದು ಪ್ರತ್ಯೇಕಿಸಲಾಗುವುದಿಲ್ಲ. ದತ್ತು ಪಡೆದ ಹಳ್ಳಿಗಳಿಂದ ಬರುವ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶಾತಿಗೆ ಅನುಮತಿಸಲಾಗುವುದು ಎಂದು ಕುಲಪತಿ ಮಾಹಿತಿ ನೀಡಿದರು.
ಮಂಟೇಸ್ವಾಮಿ, ಸಿದ್ಧಪಾಜಿ, ರಾಜಪ್ಪಾಜಿ ಅಧ್ಯಯನ ಪೀಠ ಸ್ಥಾಪನೆ
ಮೈವಿವಿಯಲ್ಲಿ ಹಳೇ ಮೈಸೂರು ಭಾಗದ ಸಾಂಸ್ಕೃತಿಕ ನಾಯಕರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದ ಜತೆಯಲ್ಲಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ 30 ಲಕ್ಷ ರೂ.ಗಳನ್ನು ಒಂದು ಬಾರಿ ಕಾರ್ಪಸ್ ನಿಧಿಯಾಗಿಟ್ಟು, ಅದರಿಂದ ಬರುವ ಬಡ್ಡಿ ಹಣದಲ್ಲಿ ಈ ಪೀಠಗಳಲ್ಲಿ ಕಾರ್ಯಕ್ರಮ ನಡೆಸಲು ವಿನಿಯೋಗಿಸುವುದಾಗಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿವಿ ಅಧ್ಯಾಪಕೇತರ ವೃಂದ ಮತ್ತು ನೇಮಕಾತಿ ನಿಯಮಗಳ ಅಧಿನಿಯಮವನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆಸಲಾಯಿತು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಕೆ.ಎಂ.ಮಹಾದೇವನ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಂಡಳಿ ಸದಸ್ಯರಾದ ಪ್ರೊ.ಮುಜಾಫರ್ ಅಸ್ಸಾದಿ, ಡಾ.ಬಿ.ನಿರಂಜನ್, ಪ್ರೊ.ಎನ್.ಎಂ.ತಳವಾರ, ನಿಂಗಮ್ಮ ಬೆಟ್ಟಸೂರ್, ಪ್ರೊ. ನಿರಂಜನ ವಾನಳ್ಳಿ ಇನ್ನಿತರರು ಹಾಜರಿದ್ದರು.