ಮೈಸೂರು,ಡಿಸೆಂಬರ್ ,2,2024 (www.justkannada.in): ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದಿಂದ ಪೂರ್ವ ಕರಾವಳಿ ರಾಜ್ಯಗಳಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ರಾಜ್ಯಕ್ಕೂ ಫೆಂಗಲ್ ಸೈಕ್ಲೋನ್ ಎಫೆಕ್ಟ್ ತಟ್ಟಿದೆ.
ನಿನ್ನೆಯಿಂದ ರಾಜ್ಯಾದ್ಯಂತ ಹಲವೆಡೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡು, ದಿನ ನಿತ್ಯದ ಕಾರ್ಯ ಚಟುವಟಿಕೆಗಳಿಗೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಸೈಕ್ಲೋನ್ ಎಫೆಕ್ಟ್ ನಿಂದಾಗಿ ಮನೆಯಿಂದ ಹೊರ ಬರಲು ಆಗದ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೈಸೂರು, ಮಂಡ್ಯ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಾಖಲೆಯ ಮಳೆ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಒಂದೇ ದಿನದಲ್ಲಿ 86 ಸೆ.ಮೀ ದಾಖಲೆಯ ಮಳೆಯಾಗಿದೆ. ರಾಮನಗರ 66 ಸೆ.ಮೀ., ಕೋಲಾರ 36 ಸೆಂ.ಮೀ, ಮೈಸೂರು 35 ಸೆ.ಮೀ ತುಮಕೂರು 30 ಸೆ.ಮೀ ಮಳೆಯಾಗಿದೆ. ತಮಿಳುನಾಡಿನಲ್ಲಿ ಭಾರಿ ಮಳೆ ಹಿನ್ನಲೆ, ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ತಮಿಳುನಾಡಿನಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮೈಸೂರು ಜಿಲ್ಲೆಯಾದ್ಯಂತ ಮಲೆನಾಡಿನ ವಾತಾವರಣ.
ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಮೈಸೂರಿನ ಒಂಟಿಕೊಪ್ಪಲ್ ನಲ್ಲಿ ಮರದ ಕೊಂಬೆ ಮುರಿದು ಬಿದ್ದಿದೆ.
ಮಾದಪ್ಪನ ಬೆಟ್ಟದಲ್ಲಿ 4 ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್.
ಫೆಂಗಲ್ ಅಬ್ಬರದಿಂದಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಮಲೇ ಮಹದೇಶ್ವರ ಬೆಟ್ಟದಲ್ಲಿ 4 ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿದ್ದು, ತಡರಾತ್ರಿ 4 ತಾಸು ನಿಂತಲ್ಲೇ ನಿಂತು ಮಳೆ ನಡುವೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಆನೆ ತಲೆದಿಂಬದ ಬಳಿ ಜೋರು ಮಳೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ತಡರಾತ್ರಿ 1ರ ತನಕವೂ ಟ್ರಾಫಿಕ್ ಜಾಮ್ ಉಂಟಾಗಿದ್ದು,
ಬಳಿಕ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಮರ ತೆರವು ಗೊಳಿಸಲು ಸುಗಮ ಸಂಚಾರಕ್ಕೆ ಹರಸಾಹಸಪಟ್ಟರು. ಅಮವಾಸ್ಯೆ ಪೂಜೆಗೆ ಹೋಗಿದ್ದ ಜನರಿಗೆ ಮಳೆ ಅಡ್ಡಿಯುಂಟು ಮಾಡಿದ್ದು, ನಿನ್ನೆ ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಕ್ತಾದಿಗಳು ಹೈರಾಣರಾದರು. ಇನ್ನೂ 5 ದಿನಗಳ ಕಾಲ ಮಳೆರಾಯ ಹೀಗೆಯೇ ಅಬ್ಬರಿಸಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
Key words: ‘Fengal, Cyclone, effect, Rain, People