ಮಂಡ್ಯ,ಡಿಸೆಂಬರ್,16,2023(www.justkannada.in): ಭಾರಿ ಸುದ್ದಿಯಾಗಿದ್ದ ಮಂಡ್ಯದಲ್ಲಿ ನಡೆದಿದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣ ಸಂಬಂಧ ಈವರೆಗೆ ಅಲೆಮನೆಯನ್ನ ಸೀಜ್ ಮಾಡದ ಹಿನ್ನೆಲೆ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಅವರಿಗೆ ವಿಪಕ್ಷನಾಯಕ ಆರ್.ಅಶೋಕ್ ತರಾಟೆ ತೆಗೆದುಕೊಂಡರು.
ಮಂಡ್ಯದ ಹುಳ್ಳೇನಹಳ್ಳಿ ಸಮೀಪದ ಆಲೆಮನೆಯಲ್ಲಿ ನಡೆಯುತ್ತಿತ್ತು ಎನ್ನಲಾದ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣದ ಸ್ಥಳಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿಗೆ ತರಾಟೆ ತೆಗೆದುಕೊಂಡ ಆರ್.ಅಶೋಕ್, ಅಲೆಮನೆಯನ್ನ ಯಾಕೆ ಇನ್ನೂ ಸೀಜ್ ಮಾಡಿಲ್ಲ. ಅಂದರೆ ನೀವು ಶಾಮೀಲಾಗಿದ್ದೀರಾ ..? ಈವರೆಗೆ ಸೀಜ್ ಮಾಡಿಲ್ಲಾಂದ್ರೆ ನೀವು ಶಾಮೀಲಾಗಿದ್ದೀರಾ? ಜನರಿಗೆ ಯಾವ ಸಂದೇಶ ಕೊಡ್ತಿದ್ದೀರಿ ಎಂದು ಕಿಡಿಕಾರಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದೇನೆ. ಆದರೆ, ಈವರೆಗೂ ಆಲೆಮನೆ ಯಥಾ ಪ್ರಕಾರ ನಡೆಯುತ್ತಿದೆ. ಮುಖ್ಯವಾಗಿ ಸರ್ಕಾರ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾದರೆ, ಕೂಡಲೇ ಸ್ಥಳವನ್ನು ಮಹಜರ್ ಮಾಡಿ ಸರ್ಕಾರದ ಸೀಲ್ ಹಾಕಬೇಕಿತ್ತು. ಆದರೆ, ಈ ಜಾಗದಲ್ಲಿ ಏನೂ ಕ್ರಮ ಆಗಿಲ್ಲ. ಎಲ್ಲ ಸಾಕ್ಷಿಗಳು ನಾಶವಾಗಿವೆ. ಮುಖ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಯಾವುದೇ ಸಾಕ್ಷ್ಯಗಳು ಇಲ್ಲಿ ಸಿಗುತ್ತಿಲ್ಲ ಎಂದು ಹರಿಹಾಯ್ದರು.
Key words: Fetus -killing –case- Opposition leader -R. Ashok – DHO