ಬೆಂಗಳೂರು,ಜನವರಿ,02,2021(www.justkannada.in) : ಈಗಾಗಲೇ ಸಾರಿಗೆ ನೌಕರರ ಮೂರು ಬೇಡಿಕೆಗಳನ್ನ ಈಡೇರಿಸಿದ್ದೇವೆ. ನಾಳೆ ಮತ್ತೆ ಸಭೆ ನಡೆಸಿ ಹದಿನೈದು ದಿನಗಳಲ್ಲಿ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸೂಚಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ಮೂಲಕ ನಾಲ್ಕೈದು ಸಭೆಗಳನ್ನು ನಡೆಸಲಾಗಿದೆ. ನೌಕರರ ತರಬೇತಿ ಅವಧಿ ಎರಡು ವರ್ಷದ ಬದಲಿಗೆ ಒಂದು ವರ್ಷಕ್ಕೆ ಇಳಿಸಲಾಗಿದೆ. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲು ಸಮಿತಿ ವರದಿ ಕೊಟ್ಟಿದೆ. ಹದಿನೈದು ದಿನಗಳಲ್ಲಿ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.
ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕುವ ಕೆಲಸ ಮಾಡಬಾರದು
ಒಂದೂವರೆ ತಿಂಗಳ ಸಂಬಳ ನೀಡದ ವಿಚಾರವಾಗಿ ಮಾತನಾಡಿದ ಅವರು, ನೌಕರರಿಗೆ ನಮ್ಮ ಮೇಲೆ ನಂಬಿಕೆ ಇದೆ. ಹೀಗಿರುವಾಗ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕುವ ಕೆಲಸ ಮಾಡಬಾರದು. ನಾವೆಲ್ಲಾ ಒಂದು ಕುಟಂಬದಂತೆ ಇದ್ದೇವೆ. ಅಪರಾಧ ಮಾಡಿರುವವರು ಅಮಾನತು ಆಗಿದ್ದಾರೆ ಎಂದು ಹೇಳಿದ್ದಾರೆ.
ಈಗ ಹಣಕಾಸು ಇಲಾಖೆಯಿಂದ ಹಣ ಬಂದಿಲ್ಲ. ಹೀಗಾಗಿ, ಡಿಸೆಂಬರ್ ತಿಂಗಳ ಅರ್ಧ ಸಂಬಳ ಮಾತ್ರ ಕೊಟ್ಟಿದ್ದೇವೆ. ಇನ್ನು ಎರಡ್ಮೂರು ದಿನಗಳಲ್ಲಿ ಹಣಕಾಸು ಇಲಾಖೆಯಿಂದ ಹಣ ಬರಲಿದೆ. ನಂತರದಲ್ಲಿ ಯಾವುದೇ ಬಾಕಿ ಉಳಿಸಿಕೊಳ್ಳುವುದಿಲ್ಲ. ಸಂಬಳ ಕಡಿತವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
key words : Fifteen-days-transport-employees-all orders-fulfill-Action-Minister-Laxman Savadi