ಉಡುಪಿ,ಫೆಬ್ರವರಿ,20,2021(www.justkannada.in): ಮುಂದಿನ ಮುರು ವರ್ಷಗಳ ಅವಧಿಯಲ್ಲಿ ಒಟ್ಟು 16 ಸಾವಿರ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶನಿವಾರ ನೂತನ ಪೊಲೀಸ್ ವಸತಿ ಗೃಹ ಸಮುಚ್ಚಯ ಕಟ್ಟಡ ಉದ್ಘಾಟಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಈಗಾಗಲೇ 6 ಸಾವಿರ ಪೊಲೀಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 16 ಸಾವಿರ ಪೊಲೀಸ್ ಹುದ್ದೆ ಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಇದರಿಂದ ಪೊಲೀಸ್ ಬಲ ಮತ್ತಷ್ಟು ಹೆಚ್ಚಲಿದೆ. ಈಗಿರುವ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕ ವಾಗಿದೆ. ಮಾನವ ಮಧ್ಯಸ್ಥಿಕೆ ಇಲ್ಲದ ರೀತಿ ನೇಮಕಾತಿ ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಡಾರ್ಕ್ ವೆಬ್ ಮೂಲಕ ಜನರನ್ನು ಸಂಪರ್ಕಿಸಿ ಡ್ರಗ್ ಪೂರೈಕೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ದೇಶದಲ್ಲಿ ಮೊಟ್ಟ ಮೊದಲು ಮಟ್ಟ ಹಾಕಿದ್ದು ಕರ್ನಾಟಕ ಪೊಲೀಸ್. ಇದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಾಲ್ಕು FSL ಕೇಂದ್ರಗಳ ಸ್ಥಾಪನೆ
ರಾಜ್ಯದಲ್ಲಿರುವ ನಾಲ್ಕು ವಿಭಾಗಗಳಲ್ಲಿ ಒಂದೊಂದು ಅತ್ಯಂತ ಸುಸಜ್ಜಿತ FSL ತನಿಖಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಹೆಚ್ವುತ್ತಿರುವ ಸೈಬರ್ ಕ್ರೈಮ್ ನ್ಮು ಮಟ್ಟ್ ಹಾಕ ಲಾಗುವುದು. ಬೆಳಗಾವಿ, ಮೈಸೂರು, ಮಂಗಳೂರು, ಕಲಬುರಗಿ ವಿಭಾಗಗಳಲ್ಲಿ ತಲಾ ಒಂದು ಎಫ್ ಎಸ್ ಎಲ್ ಲ್ಯಾಬ್ ಆರಂಭಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪೊಲೀಸ್ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಾರ್ಚ್ 31 ರೊಳಗಾಗಿ ಅವರು ವರದಿ ಸಲ್ಲಿಸಲಿದ್ದಾರೆ. ಪೊಲೀಸ್ ವ್ಯವಸ್ಥೆ ಸುಧಾರಿಸಲು ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಎಲ್ಲ ಜಿಲ್ಲೆಗಳಲ್ಲಿ ಒಂದೊಂದು ಸೈಬರ್ ಠಾಣೆ
ಹತ್ತು ವರ್ಷಗಳ ಹಿಂದೆ ಸೈಬರ್ ಅಪರಾಧಗಳು ಇರಲಿಲ್ಲ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ವುತ್ತಿವೆ. ಪೊಲೀಸ್ ಇಲಾಖೆಗೆ ಇದು ಹೊಸ ಸವಾಲು ಒಡ್ಡಿದೆ. ಈ ಅಪರಾಧ ಮಟ್ಟ ಹಾಕಲು ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ರಾಜ್ಯದಲ್ಲಿ ಕೋಮು ಗಲಭೆ ಸೃಷ್ಠಿ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆದೇಶಿಸಿಸ್ದೇನೆ ಎಂದು ಅವರು ತಿಳಿಸಿದರು.
ಹೆಬ್ರಿಗೆ ಎರಡು ಠಾಣೆ
ಹೆಬ್ರಿಯಲ್ಲಿ ಎರಡು ಪೊಲೀಸ್ ಠಾಣೆಗಳ ಅಗತ್ಯ ಇದೆ ಎಂದು ಶಾಸಕ ಸುನಿಲ್ ಕುಮಾರ್ ಬೇಡಿಕೆ ಇಟ್ಟಿದ್ದಾರೆ. ಹೆಬ್ರಿಗೆ (ಕಾ ಮತ್ತು ಸು) ಪೊಲೀಸ್ ಠಾಣೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಅಗ್ನಿಶಾಮಕ ಠಾಣೆ ಸ್ಥಾಪನೆ ಅಸಾಧ್ಯವಾಗದಿದ್ದರೆ ಅಗ್ನಿಶಾಮಕ ಉಪ ಠಾಣೆ ಜತೆ ಫೈರ್ ಇಂಜಿನ್ ವಾಹನ ನೀಡಲಾಗುವುದು. ಈ ವಿಷಯಗಳನ್ನು ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು. ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
Key words: fill 16,000 police -posts -three years-Home Minister -Basavaraja Bommai.