ನವದೆಹಲಿ,ಫೆಬ್ರವರಿ,1,2022(www.justkannada.in): ಕೇಂದ್ರ ಸರ್ಕಾರ ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದೆ.ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಮಂಡನೆಗೆ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿದ್ದು, ರಾಷ್ಟ್ರಪತಿಗಳಿಂದ ಬಜೆಟ್ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಫುಟ ಸಭೆ ನಡೆಯಲಿದೆ. 11 ಗಂಟೆಗೆ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಲಿದ್ದು, ಡಿಜಿಟಲ್ ರೂಪದಲ್ಲಿ ಬಜೆಟ್ ಇರಲಿದೆ.
ಬಜೆಟ್ ಗಾತ್ರ 35 ಲಕ್ಷ ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ದೆಹಲಿ -ಕೊಲ್ಕತ್ತಾಗೆ ಬುಲೆಟ್ ರೈಲು ಘೋಷಣೆ ಮಾಡುವ ಸಾಧ್ಯತೆ ಇದೆ. ಮೂಲ ಸೌಕರ್ಯ, ಎಲೆಕ್ಟ್ರಿಕ್ ವೆಹಿಕಲ್, ಕೃಷಿ ವಲಯಕ್ಕೆ ವಿಶೇಷ ಒತ್ತು ನೀಡಲಾಗುವುದು ಎನ್ನಲಾಗಿದೆ.
ನಿರ್ಮಲಾ ಸೀತಾರಾಮನ್ 2019, 2020, 2021ರಲ್ಲಿ ಬಜೆಟ್ ಮಂಡಿಸಿದ್ದರು. ಇಂದು 4ನೇ ಬಾರಿಗೆ ಬಜೆಟ್ ಮಂಡಿಸುತ್ತಾರೆ. ಕೊರೊನಾ ಕಾರಣದಿಂದಾಗಿ ಬಜೆಟ್ ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಿರ್ಮಲಾ ಸೀತಾರಾಮನ್ 2020ರಲ್ಲಿ ದಾಖಲೆಯ 160 ನಿಮಿಷ ಬಜೆಟ್ ಮಂಡಿಸಿದ್ದರು. ಈ ಬಾರಿ 90ರಿಂದ 120 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡುವ ಸಾಧ್ಯತೆಯಿದೆ.
Key words: Finance Minister- Nirmala Sitharaman-Union Budget.