ಮೈಸೂರು,ಅಕ್ಟೋಬರ್,26,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಸರಳ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದ್ದು ಇಂದು ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಅಭಿಮನ್ಯು 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ಅಭಿಮನ್ಯುವಿಗೆ, ವಿಜಯ ಕಾವೇರಿ, ಗೋಪಿ ಸಾಥ್ ನೀಡಿದ್ದಾರೆ. ಕೊರೋನಾ ಹಿನ್ನೆಲೆ ಈ ಬಾರಿ ಅರಮನೆ ಆವರಣಕ್ಕೆ ಜಂಬೂಸವಾರಿ ಸೀಮಿತವಾಗಿತ್ತು. ಹೀಗಾಗಿ 400 ಮೀಟರ್ ನಲ್ಲಿ ಕ್ಯಾಪ್ಟನ್ ಅಭಿಮನ್ಯು ಗಾಂಭೀರ್ಯ ನಡಿಗೆ ಹಾಕಿ ಸಾಗಿದನು.
ನಂತರ ಬಲರಾಮ ದ್ವಾರದ ಬಳಿ ಸಂಜೆ 4.17 ವೇಳೆಗೆ ಜಂಬೂ ಸವಾರಿ ಮೆರವಣಿಗೆ ಮುಕ್ತಾಯವಾಯಿತು. ಈ ಬಾರಿ 23 ನಿಮಿಷಗಳಿಗಷ್ಟೇ ಜಂಬೂಸವಾರಿ ಸೀಮಿತವಾಗಿತ್ತು. ಇನ್ನು ಈ ಬಾರಿ ಮೈಸೂರು ಜಿಲ್ಲಾ ಪಂಚಾಯಿತಿ ವತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಜಂಬೂ ಸವಾರಿಯಲ್ಲಿ ಪ್ರದರ್ಶನಗೊಂಡಿದೆ.
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೊರೊನಾ ಯೋಧರ ಸೇವೆ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಆನೆ ಬಂಡಿ ಸ್ತಬ್ಧಚಿತ್ರ ಮತ್ತೊಂದು ವಿಶೇಷವಾಗಿದೆ. ಅರಮನೆ ವಾದ್ಯಗೋಷ್ಠಿ ಕುರಿತಾದ ಚಿತ್ರವೇ ಆನೆ ಬಂಡಿ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಅಲ್ಲಿ ನೆರೆದಿದ್ದ ಪ್ರೇಕ್ಷಕರು ಕಣ್ತುಂಬಿಕೊಂಡರು.
Key words: Finish – historic – mysore-dasara-jumbo savari