ಮೈಸೂರು,ಜ,9,2020(www.justkannada.in): ಮಾನಸಗಂಗೋತ್ರಿ ಆವರಣದಲ್ಲಿ ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದವರ ವಿರುದ್ಧ ಕೂಡಲೇ ಎಫ್.ಐ.ಆರ್ ದಾಖಲಿಸಿ ಅವರನ್ನ ವಿಶ್ವವಿದ್ಯಾನಿಲಯದಿಂದ ಕೂಡಲೇ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಮೈಸೂರು ವಿವಿ ಕುಲಪತಿಗೆ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡರು, ದಿನಾಂಕ 08.01.2020ರಂದು ಸಂಜೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಘೋಷಣೆಗಳು, ಫ್ರೀ ಕಾಶ್ಮೀರ (FREE KASHMIRA ) ಎಂಬ ಫಲಕಗಳ ಪ್ರದರ್ಶಿಸಿದ್ದಾರೆ. ಈ ಮೂಲಕ ಸರ್ಕಾರದ ವಿರುದ್ಧ ಪಿತೂರಿ, ವಿದ್ಯಾರ್ಥಿಗಳಿಗೆ ಸುಳ್ಳು ಸುದ್ಧಿಗಳನ್ನು ಹರಡಿ, ಪ್ರಚಾರ ಮಾಡಿ ಪ್ರಚೋದನೆ ಮತ್ತು ಪ್ರತಿಭಟನೆ ಮಾಡಿದ ಎಲ್ಲಾ ಸಂಘಟನೆಗಳ ಮುಖ್ಯಸ್ಥರ ವಿರುದ್ಧ ಕೂಡಲೇ ಮೈಸೂರು ವಿಶ್ವವಿದ್ಯಾನಿಲಯವೂ ಎಫ್.ಐ.ಆರ್. ದಾಖಲಿಸಬೇಕು. ಈ ಹೋರಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಕೂಡಲೇ ವಿಶ್ವವಿದ್ಯಾನಿಲಯದಿಂದ, ಹಾಸ್ಟೆಲ್ ಗಳಿಂದ ಸಸ್ಪೆಂಡ್ ಮಾಡಬೇಕೆಂದು ಮೈಸೂರು ವಿವಿ ಕುಲಪತಿಗಳಿಗೆ ಆಗ್ರಹಿಸಿದ್ದಾರೆ. .
ದೆಹಲಿಯ ಜವಾಹರಲಾಲ ನೆಹರೂ (ಜೆ.ಎನ್.ಯು.) ವಿಶ್ವವಿದ್ಯಾನಿಲಯದಲ್ಲಿ ಇದೇ ರೀತಿಯ ಎಡಪಂಥೀಯ ವಿದ್ಯಾರ್ಥಿಗಳು, ದೇಶದ್ರೋಹಿಗಳು, ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, (ಹಿಂಸಾಚಾರ ನಡೆಸಿ) ಪುನಃ ತಾವೇ ಹಲ್ಲೆಗೊಳಗಾದವರಂತೆ ನಟಿಸಿ, ನಾಟಕ ಮಾಡುತ್ತಿದ್ದಾರೆ. ಅದೇ ರೀತಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ, ವಿದ್ಯಾರ್ಥಿಗಳನ್ನು, ಅಧ್ಯಾಪಕರನ್ನು ಪ್ರಚೋದನೆ ಉಂಟು ಮಾಡಿ ವಿಶ್ವವಿದ್ಯಾನಿಲಯದ ಮತ್ತು ಸಮಾಜದ ಶಾಂತಿ ಭಂಗವಾಗುವಂತೆ ನಡೆದುಕೊಳ್ಳುತ್ತಿರುವ ಎಲ್ಲಾ ಸಂಘಟನೆಗಳನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಈ ಕೂಡಲೇ ನಿಷೇದಿಸಬೇಕೆಂದು ಇಸಿ ನಿಂಗರಾಜಗೌಡ ಒತ್ತಾಯಿಸಿದ್ದಾರೆ.
Key words: FIR -against -Free Kashmir- Mansagangotri-Mysore university-Chancellor