ಮೈಸೂರು,ಸೆಪ್ಟಂಬರ್,19,2022(www.justkannada.in): ಭ್ರಷ್ಟಾಚಾರ ಆರೋಪದ ಮೇಲೆ ಸಚಿವರಾದ ಎಸ್.ಟಿ. ಸೋಮಶೇಖರ್ ಅವರ ಮೇಲೆ ಎಫ್ ಐಆರ್ ದಾಖಲಾಗಿರುವ ಕಾರಣ ಅವರನ್ನು ಸರ್ಕಾರವು ಮೈಸೂರು ದಸರಾ ಕಾರ್ಯಕ್ರಮಗಳಿಂದ ಹೊರಗಿಡುವಂತೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಒತ್ತಾಯಿಸಿದರು.
ಈ ಸಂಬಂಧ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿರುವ ಕೆ.ಎಸ್ ಶಿವರಾಮು, ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರ ಮೇಲೆ ದಿನಾಂಕ 18-09-2022ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಯಡಿಯಲ್ಲಿ ಪ್ರಕರಣವನ್ನು (ಎಫ್ಐಆರ್) ದಾಖಲಿಸಲಾಗಿದೆ. ಇವರ ಮೇಲೆ ಇರುವ ಗುರುತರ ಆರೋಪವೆಂದರೆ ಅವರು ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಮಲಿಂಗಂ ಕನ್ಸ್ ಟ್ರಕ್ಷನ್ ಕಂಪನಿಗೆ ಎಸ್.ಟಿ. ಸೋಮಶೇಖರ್ ರವರು ತಮ್ಮ ಪ್ರಭಾವವನ್ನು ಬಳಸಿ 666.22 ಕೋಟಿ ರೂ. ಮೊತ್ತದ ವಸತಿ ಸಮುಚ್ಚಾಯದ ಟೆಂಡರ್ ಅನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡಿರುವ ಆರೋಪವಿದೆ. ಮತ್ತು ಈ ಟೆಂಡರ್ ನಲ್ಲಿ ಅವ್ಯವಹಾರ ನಡೆದು ಲಂಚ ಪಡೆದಿರುವ ಸಂದರ್ಭ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವರಾದ ಎಸ್.ಟಿ. ಸೋಮಶೇಖರ್ ಹಾಗೂ ಇತರರ ಮೇಲೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಾದ ಎಸ್.ಟಿ. ಸೋಮಶೇಖರ್ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಲಂಗಳಡಿ ಪ್ರಕರಣ ದಾಖಲಾಗಿದೆ. ಬಹಳ ಗುರುತರ ಆರೋಪ ಇವರ ಮೇಲಿದೆ. ಆದ್ದರಿಂದ ಇವರನ್ನು ಸರ್ಕಾರ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮಗಳಿಂದ ಬಿಡುಗಡೆಗೊಳಿಸಬೇಕು. ಮೇಲ್ಕಂಡ ಪ್ರಕರಣದಲ್ಲಿ ಎಸ್.ಟಿ. ಸೋಮಶೇಖರ್ ಅವರಿಗೆ ಜಾಮೀನು ಕೂಡ ಇಲ್ಲಿಯವರೆಗೆ ದೊರಕಿರುವುದಿಲ್ಲ.
ಈ ವಿಚಾರಗಳನ್ನು ಮನಗಂಡು ಮೈಸೂರು ಜಿಲ್ಲಾಡಳಿತ ಸಚಿವರಾದ ಎಸ್.ಟಿ. ಸೋಮಶೇಖರ್ ರವರನ್ನು ದಸರಾ ಕಾರ್ಯಕ್ರಮಗಳಿಂದ ಹೊರಗಿಡಬೇಕು. ವಿಶ್ವವಿಖ್ಯಾತ ಮೈಸೂರು ದಸರಾ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಕಳಂಕಿತ ಸಚಿವರಿಂದ ಮೈಸೂರು ದಸರಾಗೆ ಕಳಂಕ ತಟ್ಟುವುದು ಬೇಡ. ಇವರಿಂದ ದಸರಾಗೆ ಕಪ್ಪು ಚುಕ್ಕಿ ಬರಬಾರದು. ಈ ಕಾರಣದಿಂದ ಕೂಡಲೇ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಎಫ್ ಐಆರ್ ದಾಖಲಾದ ಮೇಲೂ ಸಚಿವರು ನಿನ್ನೆ ಜಿಲ್ಲಾಡಳಿತಗಳೊಂದಿಗೆ ದಸರಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದು ಕಾನೂನು ಬಾಹಿರ. ಆ ಮೂಲಕ ಸಚಿವರೇ ಈ ನೆಲದ ಕಾನೂನನ್ನು ಉಲ್ಲಂಘಿಸಿದ್ದಾರೆ. ನ್ಯಾಯ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಿಲ್ಲ. ಪ್ರಭಾವಿಗಳಿಗೆ ಒಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಇದೆಯೇ? ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡತೊಡಗಿದೆ.
ಈ ಬಾರಿ ರಾಷ್ಟ್ರಪತಿಗಳು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಕ್ರಿಮಿನಲ್ ಪ್ರಕರಣಗಳಡಿ ಮೊಕದ್ದಮೆ ದಾಖಲಾಗಿರುವ ಒಬ್ಬ ಸಚಿವರು ರಾಷ್ಟ್ರಪತಿಗಳೊಂದಿಗೆ ಭಾಗವಹಿಸುವುದು ಎಷ್ಟು ಸಮಂಜಸ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ದಸರಾಗೆ ಅಪಖ್ಯಾತಿ ಬರುತ್ತದೆ. ಈ ಎಲ್ಲಾ ವಿಚಾರಗಳನ್ನು ಮನಗಂಡು ಜಿಲ್ಲಾಧಿಕಾರಿಗಳು ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.
ಸಚಿವರಾದ ಸೋಮಶೇಖರ್ ನೈತಿಕತೆಯಿಂದ ಸಚಿವರ ಹುದ್ದೆಗೆ ರಾಜೀನಾಮೆ ನೀಡಿ ಆರೋಪ ಮುಕ್ತರಾದ ಮೇಲೆ ಸಚಿವರಾಗಲು ನಮ್ಮ ಅಭ್ಯಂತರವಿಲ್ಲ. ಆದ್ದರಿಂದ ಸೋಮಶೇಖರ್ ರವರೇ ಇದನ್ನು ತಿಳಿದು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Key words: FIR –Filing- exclude- Minister -ST Somasekar –mysore- Dasara