ಬೆಂಗಳೂರು,ಅ,22,2019(www.justkannada.in): ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.
‘ಆರಂಭವೇ ಆನಂದವೇ’ಎಂಬ ಗೀತೆ ರಿಲೀಸ್ ಆಗಿದೆ. ಭಾರತೀಯ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮಕ್ಕಳನ್ನೇ ಪ್ರಧಾನವಾಗಿಟ್ಟುಕೊಂಡು ವಾಣಿಜ್ಯಾತ್ಮಕ ದೃಷ್ಟಿಕೋನದಲ್ಲಿ ಮೂಡಿ ಬಂದಿರುವ ಚಿತ್ರವೊಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಆವಿಷ್ಕಾರ ಎನ್ನಲಾದ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ಮುಂದಿನ ತಿಂಗಳು ನವೆಂಬರ್ 8 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.
ಮಕ್ಕಳೇ ಪ್ರಧಾನ ಪಾತ್ರಗಳ ಮೂಲಕ ತಯಾರಾದ ಚಿತ್ರವು ನಿರೀಕ್ಷೆ ಮೂಡಿಸಿದ್ದು ಸೋಮವಾರ, ಅ.21 ರಂದು ಚಿತ್ರದ ಮೊದಲ ಲಿರಿಕಲ್ ವಿಡಿಯೋ ಗೀತೆ ಬಿಡುಗಡೆಯಾಗಿದೆ. ರವಿ ಬಸ್ರೂರು ಚಿತ್ರವನ್ನು ತಯಾರಿಸುವ ಜವಾಬ್ದಾರಿ ಹೊತ್ತಿರುವ ಜೊತೆಗೆ ಸಂಗೀತವನ್ನೂ ನೀಡಿದ್ದಾರೆ. ಚಿತ್ರದ ‘ಆರಂಭವೇ ಆನಂದವೇ’ ಎಂಬ ವಿಡಿಯೋ ಗೀತೆ ಸೋಮವಾರ ಸಂಜೆ 7 ಕ್ಕೆ ಬಿಡುಗಡೆಯಾಗಿದೆ. ಕಿನ್ನಾಳ ರಾಜ್ ಗೀತೆಗೆ ಸಾಹಿತ್ಯ ಬರೆದಿದ್ದು ಸಂತೋಷ್ ವೆಂಕಿ ಹಾಡಿಗೆ ದನಿಯಾಗಿದ್ದಾರೆ.
ಮಕ್ಕಳೇ ಇಲ್ಲಿ ನಾಯಕ, ನಾಯಕಿ, ತಂದೆ, ತಾಯಿ, ಅಜ್ಜಿ, ಸ್ನೇಹಿತರು ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ಮಕ್ಕಳ ಮೂಲಕವೇ ಚಿತ್ರಿಸಿ ತೆರೆಗೆ ತರಲಾಗುತ್ತಿದೆ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಇರುವ ಅಂಶಗಳೆಲ್ಲವೂ ಇದರಲ್ಲಿದೆ. ನಾಯಕ, ನಾಯಕಿಯ ವಾಗ್ಯುದ್ಧಗಳು, ನಾಯಕನ ಖಡಕ್ ಡೈಲಾಗ್ ಗಳು, ನಾಯಕ, ನಾಯಕಿಯ ಪ್ರೇಮ ಸಲ್ಲಾಪಗಳು ಎಲ್ಲವೂ ಚಿತ್ರದಲ್ಲಿದೆ. ದೊಡ್ಡವರ ಪೋಷಾಕಿನಲ್ಲಿ ಕಾಣಿಸಿಕೊಂಡಿರುವ ಮಕ್ಕಳ ಪೋಸ್ಟರ್ ಮತ್ತು ಟೀಸರ್ ಗಮನ ಸೆಳೆದಿತ್ತು.
ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಟಾರ್ ನಟರು ಪ್ರಧಾನ ಪಾತ್ರಗಳಿಗೆ ಡಬ್ ಮಾಡಿದ ಗಿರ್ಮಿಟ್ ಟ್ರೈಲರ್ ಕಳೆದ ಶನಿವಾರ, ಅ.19 ರಂದು ರಿಲೀಸ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ರಾಜ್ ಮತ್ತು ನಟಿ ರಾಧಿಕಾ ಪಂಡಿತ್ ರಶ್ಮಿ ಎಂಬ ಮಕ್ಕಳ ಪ್ರಧಾನ ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವು ಓಂಕಾರ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿ ಸಹ ನಿರ್ಮಾಪಕರಾಗಿದ್ದಾರೆ.
ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಅವರ ತಂಡ ಭಿನ್ನ ಪ್ರಯತ್ನದ ಮೂಲಕ ಮೊದಲ ಬಾರಿಗೆ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನ್ನು ತಯಾರಿಸಿದ್ದಾರೆ. ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಲಾದಲ್ಲಿ ವಿಶ್ವದಾದ್ಯಂತ ನವೆಂಬರ್ 8 ರಂದು ಬೆಳ್ಳಿ ಪರದೆ ಮೇಲೆ ದಾಳಿ ಮಾಡಲಿದೆ.
Key words: first- lyrical video song-release – children’s -commercial film-Girmit.