ಬೆಂಗಳೂರು,ಮಾರ್ಚ್,26,2025 (www.justkannada.in): ವಿದ್ಯುತ್ ದರ ಏರಿಕೆಯಿಂದ ರಾಜ್ಯದ ಕೈಗಾರಿಕೆಗಳು, ವ್ಯಾಪಾರ ವಲಯ ಸಣ್ಣ ಉದ್ಯಮಗಳ ಮೇಲೆ ಬರೆ ಎಳೆದಂತಾಗಿದೆ ಎಂದು ಎಫ್ ಕೆಸಿಸಿ ಅಧ್ಯಕ್ಷ ಎಂ. ಜಿ. ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಪೀಣ್ಯ ಕೈಗಾರಿಕಾ ಸಂಘಗಳರವರ ವತಿಯಿಂದ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದಲ್ಲಿ ಕೈಗಾರಿಕೆಗಳು, ವಾಣಿಜ್ಯ ಮತ್ತು ವ್ಯಾಪಾರ ಹಲವಾರು ಸಮಸ್ಯೆಗಳ ಕುರಿತು ಮಾಹಿತಿ ನೀಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಫ್ ಕೆಸಿಸಿ ಅಧ್ಯಕ್ಷ ಎಂ. ಜಿ. ಬಾಲಕೃಷ್ಣ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಇತ್ತೀಚೆಗೆ ವಿದ್ಯುತ್ ಶುಲ್ಕ ಹೆಚ್ಚಳ ಮಾಡಿದ್ದು, ಈ ಹೆಚ್ಚಳದಿಂದ ರಾಜ್ಯದ ಕೈಗಾರಿಕೆಗಳು, ವ್ಯಾಪಾರ ವಲಯ ಮತ್ತು ಸಣ್ಣ ಉದ್ಯಮಗಳ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಕೋವಿಡ್ ನಿಂದ ನಲುಗಿರುವ ಕೈಗಾರಿಕೆಗಳಿಗೆ ವಿದ್ಯುತ್ ದರ ಹೆಚ್ಚಳವು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದ ಕೈಗಾರಿಕೋದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದ್ದು ದುಬಾರಿ ವಿದ್ಯುತ್ ಶುಲ್ಕವನ್ನು ಪಾವತಿಸುವ ಶಕ್ತಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಇರುವುದಿಲ್ಲ ಎಂದರು.
ವಿದ್ಯುತ್ ದರ ಹೆಚ್ಚಳದಿಂದ ಮೊದಲನೆಯದಾಗಿ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ (MSMEs) ಉತ್ಪಾದನಾ ವೆಚ್ಚ ಏರಲಿದೆ. ಕಡಿಮೆ ಲಾಭಾಂಶದೊಂದಿಗೆ ಕಾರ್ಯನಿರ್ವಹಿಸುವ ಉದ್ಯಮಗಳಿಗೆ ಇದರಿಂದ ತೀವ್ರ ಸಂಕಷ್ಟ ಉಂಟಾಗುತ್ತದೆ. ಕೈಗಾರಿಕೆಗಳು ವೃದ್ಧಿಯನ್ನು ತಗ್ಗಿಸಬೇಕಾದ ಪರಿಸ್ಥಿತಿಯಿಂದ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬೇರೆ ಇರತ ರಾಜ್ಯಗಳಿಗೆ ವಲಸೆ ಹೋಗಬೇಕಾಗುವ ಪರಿಸ್ಥಿತಿ ಒದಗುತ್ತದೆ. ಎಫ್‌ಕೆಸಿಸಿಐ, ಕಾಸಿಯಾ ಮತ್ತು ಪಿಐಎ ಸಂಸ್ಥೆಗಳು ವಿದ್ಯುತ್ ದರ ಹೆಚ್ಚಳವನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಬಾಲಕೃಷ್ಣ ತಿಳಿಸಿದರು.
ಮೌಲ್ಯ ಮಾರ್ಗದರ್ಶನ ಮತ್ತು ಆಸ್ತಿ ತೆರಿಗೆ ಹೆಚ್ಚಳದಿಂದ ಆರ್ಥಿಕ ಹೊರೆ:
ಹಾಗೆಯೇ ಕರ್ನಾಟಕ ಸರ್ಕಾರವು ಆಸ್ತಿ ಮಾರ್ಗದರ್ಶನ ಮೌಲ್ಯವನ್ನು ಹೆಚ್ಚಿಸಲು ಮುಂದಾಗಿದ್ದು, ಇದರಿಂದ ಆಸ್ತಿ ತೆರಿಗೆ ಏರಿಕೆಯಾಗಲಿದೆ. ಕೈಗಾರಿಕಾ ವಲಯದಲ್ಲಿ ಈ ಮೌಲ್ಯ ಹೆಚ್ಚಳವು ವ್ಯಾಪಾರಸ್ಥರ ಮೇಲೆ ಆರ್ಥಿಕ ಹೊರೆ ಉಂಟುಮಾಡಲಿದೆ. ಆಸ್ತಿ ತೆರಿಗೆ ಹಚ್ಚಳದಿಂದ ಕೈಗಾರಿಕೆಗಳ ಬಂಡವಾಳ ಹೂಡಿಕೆಗಳ ಮೇಲೆ ನೇರ ಪರಿಣಾಮ ಬೀಳಲಿದೆ. ಸಣ್ಣ ವ್ಯಾಪಾರ ಮತ್ತು ಸ್ಟಾರ್ಟಪ್‌ಗಳಿಗೆ ಭೂಮಿ ಖರೀದಿಯ ವೆಚ್ಚವು ಹೆಚ್ಚಾಗಲಿದೆ. ಕೈಗಾರಿಕಾ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಹಿಮ್ಮೆಟ್ಟಿಸುವ ಸಾಧ್ಯತೆ ಇದೆ. ಎಂಎಸ್‌ಎಂಇಯು ಬಾಡಿಗೆ ರೂಪದಲ್ಲಿ ಕಾರ್ಯನಿರ್ವಹಿಸುವ ಸಣ್ಣ ವ್ಯವಹಾರಗಳಿಗೆ ಹೆಚ್ಚಿನ ಹೊರೆ ಉಂಟಾಗಲಿದೆ ಎಂದು ಎಂ. ಜಿ. ಬಾಲಕೃಷ್ಣ ಸಮಸ್ಯೆಗಳ ಬಗ್ಗ ವಿವರಿಸಿದರು.
ಇ-ಖಾತಾ ಪ್ರಕ್ರಿಯೆ ಸುಗಮಗೊಳಿಸುವಿಕೆ:
ಇ-ಖಾತಾ ಪ್ರಕ್ರಿಯೆಯ ಸುಗಮಗೊಳಿಸಲು ತಕ್ಷಣವೇ ತ್ವರಿತಗೊಳಿಸಲು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದ ಎಂ. ಜಿ. ಬಾಲಕೃಷ್ಣ, ಅನುಮೋದನೆಗಳಲ್ಲಿನ ವಿಳಂಬವು ವ್ಯವಹಾರ ವಿಸ್ತರಣೆ ಮತ್ತು ಆಸ್ತಿ ವಹಿವಾಟುಗಳಿಗೆ ಅಡ್ಡಿಯುಂಟಾಗುತ್ತದೆ. ಅನೇಕ ವ್ಯವಹಾರಗಳು ಆಸ್ತಿ ದಾಖಲೆಗಳು ಮತ್ತು ದಾಖಲಾತಿ ಅಗತ್ಯತೆಗಳಲ್ಲಿ ಅಸಂಗತತೆಯೊಂದಿಗೆ ಹೋರಾಡುತ್ತವೆ. ಆಗಾಗ್ಗೆ ವ್ಯವಸ್ಥೆಯ ಸ್ಥಗಿತ ಮತ್ತು ತಾಂತ್ರಿಕ ದೋಷಗಳು ಅರ್ಜಿದಾರರಲ್ಲಿ ಹತಾಶೆಯನ್ನು ಉಂಟುಮಾಡುತ್ತವೆ ಎಂದು ತಿಳಿಸಿದರು.
Key words: Electricity, tariff, hike, FKCC President, M. G. Balakrishna