ಬೆಂಗಳೂರು, ಏಪ್ರಿಲ್, 24, 2025 (www.justkannada.in): ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಇಂದು ರಾಜ್ಯದ ಎಲ್ಲಾ ಕೈಗಾರಿಕಾ ಸಂಘ ಸಂಸ್ಥೆಗಳೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿದ ನಂತರ, ಕರ್ನಾಟಕದಾದ್ಯಂತ ಇತ್ತೀಚೆಗೆ ಕನಿಷ್ಠ ವೇತನ ಹೆಚ್ಚಳ ಮತ್ತು ರಾಜ್ಯದ ಕೈಗಾರಿಕೆಗಳ ಮೇಲೆ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯದ ಮೇಲೆ ಅದರ ಸಂಭಾವ್ಯ ವಿನಾಶಕಾರಿ ಪರಿಣಾಮದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಎಫ್‌ಕೆಸಿಸಿಐನಲ್ಲಿ ನಡೆದ ಕೈಗಾರಿಕಾ ಸಂಘ ಸಂಸ್ಥೆಗಳ ಪಾಲುದಾರರ ಸಭೆಯಲ್ಲಿ, ಏಷ್ಯಾದ ಅತಿದೊಡ್ಡ ಸಣ್ಣ ಪ್ರಮಾಣದ ಕೈಗಾರಿಕಾ ಸಮೂಹವಾದ ಪೀಣ್ಯ ಕೈಗಾರಿಕಾ ಎಸ್ಟೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಘಟಕಗಳು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ವಿಡಿಎ ಹೆಚ್ಚಳ ಮತ್ತು ಅದರ ಪರಿಣಾಮವಾಗಿ ವೇತನ ಹೆಚ್ಚಳವು ಅನೇಕ ಸಣ್ಣ ಘಟಕಗಳ ಕಾರ್ಯಾಚರಣೆಯನ್ನು ಆರ್ಥಿಕವಾಗಿ ದುಸ್ತರಗೊಳಿಸಲಿದೆ. ಸರ್ಕಾರವು ತಕ್ಷಣ ಇದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸುಮಾರು ಶೇ.20% ಎಂಎಸ್‌ಎಂಇ ಘಟಕಗಳು ಮುಚ್ಚುವ ಅಪಾಯದಲ್ಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ತಿಳಿಸಿದ್ದಾರೆ.
“ಕಾರ್ಮಿಕರಿಗೆ ನ್ಯಾಯಯುತ ಪರಿಹಾರವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದಾಗ್ಯೂ, ಸಣ್ಣ ಪ್ರಮಾಣದ ಕೈಗಾರಿಕೆಗಳ ಪಾವತಿ ಸಾಮರ್ಥ್ಯವನ್ನು ನಿರ್ಣಯಿಸದೆ ವಿವೇಚನಾರಹಿತ ವೇತನ ಹೆಚ್ಚಳವು ಅವುಗಳಲ್ಲಿ ಕೆಲವು ಮುಚ್ಚುವ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಕರ್ನಾಟಕದಲ್ಲಿ ವ್ಯಾಪಾರ ಮಾಡುವ ವೆಚ್ಚವು ಈಗ ನೆರೆಯ ರಾಜ್ಯಗಳಾದ ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕಿಂತ ಹೆಚ್ಚಾಗಿದೆ” ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.
ಕಾರ್ಮಿಕ ಇಲಾಖೆ ಹೊರಡಿಸಿರುವ ಕನಿಷ್ಟ ವೇತನಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯು ಒಳ್ಳೆಯ ಉದ್ದೇಶದಿಂದ ಕೂಡಿದ್ದರೂ, ವಿಶೇಷವಾಗಿ ಜವಳಿ, ಲಘು ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಪ್ಯಾಕೇಜಿಂಗ್ ನಂತಹ ಕಾರ್ಮಿಕ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ವಿಫಲವಾಗುತ್ತದೆ. ಇದು ಮುಂದುವರಿದರೆ, ನಿರ್ದಿಷ್ಟವಾಗಿ ಎಂಎಸ್ ಎಂಇಗಳು ಬಲಿಯಾಗಿ, ಕರ್ನಾಟಕಕ್ಕೆ ಹೋಲಿಸಿದರೆ ಕನಿಷ್ಠ ವೇತನ ಕಡಿಮೆ ಇರುವ ನೆರೆಯ ರಾಜ್ಯಗಳಿಗೆ ಸ್ಥಳಾಂತರಗೊಂಡರೆ, ಬಂಡವಾಳ ಹೂಡಿಕೆಯಲ್ಲಿ ಉದ್ಯೋಗ ನಷ್ಟ ಮತ್ತು ಸರ್ಕಾರಕ್ಕೆ ತೆರಿಗೆ ಆದಾಯ ನಷ್ಟವಾಗುತ್ತದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಎಚ್ಚರಿಸಿದ್ದಾರೆ.
ಕನಿಷ್ಟ ವೇತನ ಸಲುವಾಗಿ ಸರ್ಕಾರಕ್ಕೆ ಎಫ್ ಕೆಸಿಸಿಐ ಕೆಲವು ಮೇಲ್ಮನವಿಗಳು ಮತ್ತು ಶಿಫಾರಸುಗಳು ಮಾಡುತ್ತಿದೆ. ದೊಡ್ಡ ಕೈಗಾರಿಕೆಗಳಿಗೆ ಹೋಲಿಸಿದರೆ ಎಂಎಸ್‌ಎಂಇಗಳಿಗೆ ಪ್ರತ್ಯೇಕ, ಕನಿಷ್ಟ ವೇತನ ಸ್ಲ್ಯಾಬ್‌ಗಳನ್ನು ಪರಿಚಯಿಸುವುದು. ವೇತನ ತರ್ಕಬದ್ಧಗೊಳಿಸುವ ಸಮಿತಿಯನ್ನು ತಕ್ಷಣವೇ ಕರೆಯುವುದು. ವಿದ್ಯುತ್ ಸುಂಕ ಸಬ್ಸಿಡಿಗಳು, ಕಾರ್ಮಿಕ ಸೆಸ್ ಮನ್ನಾಗಳು ಅಥವಾ ಕಾರ್ಯನಿರತ ಬಂಡವಾಳ ಬೆಂಬಲದ ಮೂಲಕ ಪರಿಹಾರಗಳನ್ನು ಒದಗಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿದೆ.
ಏಕರೂಪದ ರಾಷ್ಟ್ರೀಯ ಕನಿಷ್ಠ ವೇತನ ಮಿತಿಯನ್ನು ಜಾರಿಗೊಳಿಸುವುದು. ಎಂಎಸ್‌ಎಂಇ ಯೋಜನೆಗಳ ಅಡಿಯಲ್ಲಿ ವೇತನ ಸಂಬಂಧಿತ ಪ್ರೋತ್ಸಾಹ ಅಥವಾ ಸಬ್ಸಿಡಿಗಳನ್ನು ಘೋಷಿಸುವುದು ಉದ್ಯೋಗ ಸೃಷ್ಟಿಯನ್ನು ಉಳಿಸಿಕೊಳ್ಳಲು ಸಣ್ಣ ಕೈಗಾರಿಕೆಗಳ ಮೇಲಿನ ನಿಯಂತ್ರಕ ಹೊರೆಯನ್ನು ಕಡಿಮೆ ಮಾಡುವುದನ್ನು ಕೇಂದ್ರ ಸರ್ಕಾರ ಮಾಡಬೇಕಿದೆ ಎಂದು ಎಂ.ಜಿ. ಬಾಲಕೃಷ್ಣ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎಫ್ ಕೆಸಿಸಿಐನ ಹಿರಿಯ ಉಪಾಧ್ಯಕ್ಷರಾದ ಉಮಾರೆಡ್ಡಿ, ಉಪಾಧ್ಯಕ್ಷ ಟಿ ಸಾಯಿರಾಂ ಪ್ರಸಾದ್, ಪಿ ಸಿ ರಾವ್, ಛೇರ್ಮನ್, ಕಾರ್ಮಿಕ ಸಮಿತಿ, ಎಫ್‌ಕೆಸಿಸಿಐ, ಎಂ.ಜಿ. ರಾಜಗೋಪಾಲ್, ಅಧ್ಯಕ್ಷರು, ಕಾಸಿಯಾ ಇವರುಗಳು ಭಾಗವಹಿಸಿದ್ದರು.
Key words: MSME, state, no longer, future, FKCCI