ವಾಹನಗಳ ನೋಂದಣಿ ಶುಲ್ಕ ಮತ್ತು ಮದ್ಯದ ಬೆಲೆಗಳಲ್ಲಿ ಹೆಚ್ಚಳ: FKCCI ಕಳವಳ

ಬೆಂಗಳೂರು,ಏಪ್ರಿಲ್,30,2025 (www.justkannada.in): ಕರ್ನಾಟಕ ಸರ್ಕಾರವು ಮದ್ಯದ ಬೆಲೆಗಳು ಮತ್ತು ವಾಣಿಜ್ಯ ವಾಹನಗಳ ನೋಂದಣಿ ಶುಲ್ಕವನ್ನು ಹೆಚ್ಚಿಸುತ್ತಿರುವ  ಬಗ್ಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ,  ಈಗಾಗಲೇ ವಿದ್ಯುತ್ ದರ, ನೀರಿನ ಶುಲ್ಕ, ಆಸ್ತಿ ತೆರಿಗೆ, ಕಸ ಸಂಗ್ರಹ ಶುಲ್ಕಗಳು, ಸಾರಿಗೆ ಸಂಬಂಧಿತ ವೆಚ್ಚಗಳಲ್ಲಿನ ಹೆಚ್ಚಳದಿಂದ ಕೈಗಾರಿಕೆಗಳು ನಲುಗುತ್ತಿವೆ.”ಈ ಸತತ ಏರಿಕೆಗಳ ಒಟ್ಟಾರೆ ಪರಿಣಾಮವು ವಾಣಿಜ್ಯೋದ್ಯಮದ ಮೇಲೆ ಕರ್ನಾಟಕದಾದ್ಯಂತ ವ್ಯವಹಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಹೇರುತ್ತಿದ್ದು, “ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ವೆಚ್ಚಗಳಿಂದ ಸರಿದೂಗಿಸಲು ಹೆಣಗಾಡುತ್ತಿದೆ. ಇದು ಅವುಗಳ ಉಳಿವಿಕೆ ಮತ್ತು ಸ್ಪರ್ಧಾತ್ಮಕತೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮದ್ಯದ ಬೆಲೆಗಳ ಹೆಚ್ಚಳವು ಆತಿಥ್ಯ ಕ್ಷೇತ್ರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿರೀಕ್ಷೆಯಿದೆ. ಅದೇ ರೀತಿ, ವಾಣಿಜ್ಯ ವಾಹನಗಳ ನೋಂದಣಿ ಶುಲ್ಕದಲ್ಲಿನ ಹೆಚ್ಚಳವು ಲಾಜಿಸ್ಟಿಕ್ಸ್ ಮತ್ತು ಸಾರಿಗೆ ವೆಚ್ಚಗಳನ್ನು ಹೆಚ್ಚಿಸುತ್ತದೆ, ಪೂರೈಕೆ ಸರಪಳಿಗಳು ಮತ್ತು ಸರಕುಗಳ ಒಟ್ಟಾರೆ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

“ಸರ್ಕಾರದ ಆದಾಯವನ್ನು ಹೆಚ್ಚಿಸುವ ಅಗತ್ಯವನ್ನು ನಾವು ಅರ್ಥಮಾಡಿಕೊಂಡಿದ್ದರೂ, ಈ ಕ್ರಮಗಳು ಸೂಕ್ತವಲ್ಲ. ವಾಣಿಜ್ಯೋದ್ಯಮಗಳ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಸಮತೋಲಿತ ಪರಿಹಾರಗಳನ್ನು ರೂಪಿಸಲು ಸರ್ಕಾರವು ಉದ್ಯಮದ ಪಾಲುದಾರರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಂ.ಜಿ. ಬಾಲಕೃಷ್ಣ ತಿಳಿಸಿದ್ದಾರೆ.

ನಮ್ಮ ರಾಜ್ಯದ ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯದ ಬೆಳವಣಿಗೆಗಳ ಅನುಕೂಲಕರ ವಾತಾವರಣಕ್ಕಾಗಿ ಮುಂದುವರಿಯಲು ಸರ್ಕಾರದೊಂದಿಗೆ ಸಹಕರಿಸಲು ಎಫ್‌ಕೆಸಿಸಿಐ ಸದಾ ಸಿದ್ಧವಾಗಿದೆ ಎಂದು ಎಂ.ಜಿ. ಬಾಲಕೃಷ್ಣ ಹೇಳಿದ್ದಾರೆ.

Key words:  FKCCI, concern, Cumulative Cost, Burden, recent Fee, Tax Hikes