ಬೆಂಗಳೂರು,ಜುಲೈ,26,2024 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿಸುವ ಕೊನೆಯ ದಿನಾಂಕವನ್ನು ಆಗಸ್ಟ್ 31, 2024 ವರೆಗೆ ವಿಸ್ತರಿಸುವಂತೆ ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮನವಿ ಮಾಡಿದ್ದಾರೆ.
ಈ ಸಂಬಂಧ ಮನವಿ ಮಾಡಿರುವ ರಮೇಶ್ ಚಂದ್ರ ಲಹೋಟಿ , ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಬಾಕಿ ಇರುವ ಆಸ್ತಿ ತೆರಿಗೆಯನ್ನು ಪಾವತಿಸಲು ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ತಂದಿದ್ದು, ಇದು ಆಸ್ತಿ ತೆರಿಗೆದಾರರಿಗೆ ಬಡ್ಡಿ ಮನ್ನಾ, ದಂಡವನ್ನು ಅರ್ಧ ಮತ್ತು ವಸತಿ ಆಸ್ತಿಗಳಿಗೆ 5 ವರ್ಷಗಳ ಪರಿಷ್ಕರಣೆ ಪ್ರಕರಣಗಳಿಗೆ ಸೀಮಿತವಾಗಿದೆ. ಈ ಯೋಜನೆಯಿಂದ ಪಾವತಿಸಬೇಕಾದ ಆಸ್ತಿ ತೆರಿಗೆಯ ಕೊನೆ ದಿನಾಂಕವನ್ನು ಜುಲೈ 31, 2024 ಎಂದು ನಿಗದಿಪಡಿಸಲಾಗಿದೆ.
ಈ ಯೋಜನೆಯಿಂದ ನಮ್ಮ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳ ಸದಸ್ಯರುಗಳು ಬಳಸಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಒನ್-ಟೈಮ್ ಸೆಟಲ್ಮೆಂಟ್ ಅತ್ಯುತ್ತಮ ಯೋಜನೆಯಾಗಿದೆ. ಆದಾಗ್ಯೂ, ನಮ್ಮ ಅನೇಕ ಸದಸ್ಯರು ತಮ್ಮ ದಾಖಲೆಗಳನ್ನು ಪರಿಶೀಲಿಸುವ ಮತ್ತು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದು, ಇದಕ್ಕೆ ಹೆಚ್ಚು ಸಮಯ ಬೇಕಾಗಿರುತ್ತದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ, ಆಸ್ತಿ ತೆರಿಗೆಗಾಗಿ ಅಮ್ನೆಸ್ಟಿ ಯೋಜನೆಯ ಒನ್-ಟೈಮ್ ಸೆಟಲ್ಮೆಂಟ್ ಅನ್ನು ಆಗಸ್ಟ್ 31, 2024 ರವರೆಗೆ ವಿಸ್ತರಿಸಬೇಕೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಬೆಂಗಳೂರು ಕರ್ನಾಟಕ ಸರ್ಕಾರ ಮತ್ತು ಬಿಬಿಎಂಪಿಗೆ ಮನವಿ ಮಾಡುತ್ತಿದ್ದೇವೆ. ಇದು ಹೆಚ್ಚಿನ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ತೆರಿಗೆ ಇತ್ಯರ್ಥವನ್ನು ಕ್ರಮಬದ್ಧಗೊಳಿಸಲು ಅನುವು ಮಾಡಿಕೊಡುವುದಲ್ಲದೆ ಜೊತೆಗೆ ಬಾಕಿ ತೆರಿಗೆಯನ್ನು ಪಾವತಿಸುವ ಮೂಲಕ ಬಿಬಿಎಂಪಿಗೆ ಮತ್ತು ರಾಜ್ಯ ಸರ್ಕಾರದ ಖಜಾನೆಗೆ ಹೆಚ್ಚು ಆದಾಯವನ್ನು ಸಲ್ಲಿಸಿದಂತಾಗುತ್ತದೆ ಎಂದು ರಮೇಶ್ ಚಂದ್ರ ಲಹೋಟಿ ತಿಳಿಸಿದ್ದಾರೆ.
Key words: FKCCI, appeals, BBMP, extend, last date, property tax