ಮೈಸೂರು, ಜುಲೈ 26, 2020 (www.justkannada.in): ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35 ಕ್ಕೆ ನಿಗದಿಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಎಫ್.ಕೆ.ಸಿ.ಸಿ.ಐ. ಮಹಾ ಸಂಸ್ಥೆ ಸ್ವಾಗತಿಸಿದೆ.
ರಾಜ್ಯದಲ್ಲಿರುವ ಎಪಿಎಂಸಿ ವರ್ತಕರ ಬಹುದಿನಗಳ ಬೇಡಿಕೆಯಾದ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಇಳಿಸಲು ಎಫ್.ಕೆ.ಸಿ.ಸಿ.ಐ. ಮಹಾಸಂಸ್ಥೆಯ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿದ್ದು, ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಮಾರುಕಟ್ಟೆ ಶುಲ್ಕ/ ಬಳಕೆದಾರರ ಶುಲ್ಕವನ್ನು ಶೇಕಡ 0.35ಕ್ಕೆ ನಿಗದಿಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಎಫ್.ಕೆ.ಸಿ.ಸಿ.ಐ. ಸ್ವಾಗತಿಸುತ್ತದೆ ಎಂದು ಸಂಸ್ಥೆ ಅಧ್ಯಕ್ಷರು ಹೇಳಿದ್ದಾರೆ.
ಮಾರುಕಟ್ಟೆ ಶುಲ್ಕ ಇಳಿಸಿರುವುದರಿಂದ ರೈತರ ಹಿತದೃಷ್ಟಿ ಜೊತೆಗೆ ರಾಜ್ಯದ ಎಪಿಎಂಸಿ ವರ್ತಕರು ಹಾಗೂ ಎಪಿಎಂಸಿ ಪ್ರಾಂಗಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕುಟುಂಬಗಳ ಹಿತದೃಷ್ಟಿಯನ್ನು ಕಾಪಾಡುವಲ್ಲಿ ಈ ನಿರ್ಧಾರ ನೆರವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಮನವಿಯನ್ನು ಪುರಸ್ಕರಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ ರವರಿಗೆ, ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರ್ ಅವರಿಗೆ ಹಾಗೂ ರಾಜ್ಯ ಸಂಪುಟದ ಸಹೋದ್ಯೋಗಿಗಳಿಗೆ ಮತ್ತು ಇಲಾಖಾಧಿಕಾರಿಗಳಿಗೆ ಎಫ್. ಕೆ.ಸಿ.ಸಿ. ಐ. ಮಹಾ ಸಂಸ್ಥೆಯು ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಸಿ ಆರ್ ಜನಾರ್ಧನ ತಿಳಿಸಿದ್ದಾರೆ.