ಬೆಂಗಳೂರು,ಅಕ್ಟೋಬರ್,16,2020(www.justkannada.in): ಭಾರಿ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಹಿನ್ನೆಲೆ ಇಂದು 15 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದರು.
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದರು.
ಒಂದು ವಾರದೊಳಗೆ ಬೆಳೆ ಹಾನಿ ಬಗ್ಗೆ ವರದಿ ನೀಡಿ. ಕೋವಿಡ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಿ, ಕಾಳಜಿ ಕೇಂದ್ರದಲ್ಲೂ ವೈದ್ಯಕೀಯ ಸೇವೆ ಇರಲಿ. ನದಿ ಪಾತ್ರದ ಗ್ರಾಮಗಳ ಜನರ ರಕ್ಷಣೆ, ಸ್ಥಳಾಂತರ ಮತ್ತು ಜಾನುವಾರುಗಳ ರಕ್ಷಣೆಯನ್ನು ಜಿಲ್ಲಾಡಳಿತ ಸರಿಯಾಗಿ ಮಾಡಬೇಕು. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ದಕ್ಷತೆ ಮತ್ತು ಮಾನವೀಯತೆಯಿಂದ ಪ್ರವಾಹ ಪರಿಹಾರ ಕಾರ್ಯಗಳನ್ನು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ ಮತ್ತು ಎನ್ ಡಿಆರ್ ಎಫ್ ನಿಧಿ ಬಳಕೆ ಮಾಡಿಕೊಂಡು ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಮಾಡಿ. ಮನೆಗಳ ಅರ್ಧಗೋಡೆ ಬಿದ್ದರೂ ಸಹ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: flood- Report -crop -damage – week-CM BS Yeddyurappa- meeting-DC