ಮೈಸೂರು, ನವೆಂಬರ್,14, 2024 (www.justkannada.in): ಕನ್ನಡ ಭಾಷೆ ಉಳಿವಿಗೆ ಜಾನಪದದ ಕೊಡುಗೆ ಅಪಾರ ಎಂದು ಜಾನಪದ ತಜ್ಞ ಡಾ. ಪಿ.ಕೆ.ರಾಜಶೇಖರ್ ಅಭಿಮತ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ಕಲಾಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಾನಪದ ತಜ್ಞ ಡಾ.ಪಿ.ಕೆ.ರಾಜಶೇಖರ್ ಅವರು, ಗ್ರಾಮೀಣ ಭಾಗದ ಜನರಲ್ಲಿ ಸದಾ ಬೆಸೆದುಕೊಂಡಿರುವ ಜಾನಪದದಿಂದಲೇ ಕನ್ನಡ ಭಾಷೆ ಉಳಿದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯರ ಜಾನಪದ ಮಹಾಕಾವ್ಯಗಳ ಸರಿಸಮಕ್ಕೆ ನಮ್ಮ ಜಾನಪದ ಮಹಾಕಾವ್ಯಗಳು ಇವೆ. ಕನ್ನಡ ಜಗತ್ತಿನ ಯಾವ ಭಾಷೆಗೂ ಕಡಿಮೆ ಇಲ್ಲದ ಸಾಂಸ್ಕೃತಿಕ ಹಿರಿಮೆ ಹೊಂದಿದೆ. ಅದನ್ನು ಇಂದಿನ ಯುವ ಸಮುದಾಯವು ಬಳಸುವ ಮೂಲಕ ಉಳಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಿನನಿತ್ಯದ ಬದುಕಿನಲ್ಲಿ ಕನ್ನಡ ಬಳಸಿದರೆ ಸಾಕು, ಕನ್ನಡ ಉಳಿಯುತ್ತದೆ. ಹಾಗೆ ಕನ್ನಡ ಉಳಿದರೆ, ನಾಡು, ನಾಡಿನ ಜನ, ನಾಡಿನತನ, ಗುಣ ಎಲ್ಲವೂ ಉಳಿಯುವುದರಲ್ಲಿ ಸಂಶಯವೇ ಇಲ್ಲ ಎಂದರು.
ಹೆಣ್ಣುಮಕ್ಕಳು ಈ ನಾಡಿನ ಸಂಸ್ಕೃತಿಯ ಉಳಿವಿನ ರೂವಾರಿಗಳು, ಹಾಗಾಗಿ ಈ ನೆಲದ ಸಾಂಸ್ಕೃತಿಕ ರಾಯಭಾರಿಗಳು ಅವರೇ. “ಎಲ್ಲಾ ಹೆಣ್ಣುಮಕ್ಕಳು ಕನ್ನಡದ ತಾಯಂದಿರು” ಎಂದರು.
ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್ ಎಂ ಮಾತನಾಡಿ, ಕನ್ನಡವನ್ನು ಹೆಚ್ಚಾಗಿ ದಿನನಿತ್ಯ ಬಳಕೆ ಮಾಡುವ ಮೂಲಕ ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಯಾವುದೇ ಭಾಷೆ ಉಳಿವುದು ಅದನ್ನು ಬಳಸುವುದರಿಂದಲೇ, ಹಾಗಾಗಿ ನಿತ್ಯವೂ ಬಳಸಿ, ಬೆಳೆಸಿ”, ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕನ್ನಡ ನೆಲ, ಜಲ ಭಾಷೆಗೆ ಸಂಬಂಧಿಸಿದ ಹಾಡು, ನೃತ್ಯ ಪ್ರದರ್ಶನ ಮಾಡಿದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆಸಿದ ಕನ್ನಡ ಹಬ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಡಾ.ಸಿ.ಎಸ್. ಕೆಂಡಗಣ್ಣೇಗೌಡ ಪ್ರಾಸ್ತಾವಿಕ ನುಡಿ ಆಡಿದರು. ಡಾ.ಭೀಮೇಶ್ ಎಚ್.ಜಿ. ಗಣ್ಯರ ಪರಿಚಯ ಮಾಡಿಕೊಟ್ಟರು. ವಿಂಧ್ಯಾಲಕ್ಷ್ಮೀ ಪ್ರಾರ್ಥಿಸಿದರು,
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಕೆ.ಪಿ.ಕೋಮಲ್, ಖಜಾಂಚಿ ಡಾ.ಬಸವರಾಜ್ ಜಿ,ಎಲ್, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಸ್ನಾತಕೋತ್ತರ ವಿಭಾಗದ ಅಮೃತವರ್ಷಿಣಿ, ವಿದ್ಯಾರ್ಥಿ ಸಂಸತ್ ಸದಸ್ಯರಾದ ಕಾವ್ಯ ಎಂ ಕಟ್ಟಿ, ದೀಕ್ಷಿತ ಎಸ್, ಜೀವಿತಾ ವಿ, ಜರೀನಾ ಜೆ, ರಕ್ಷಿತಾ ಎಚ್.ಕೆ, ಭೂಮಿಕ,ಬೃಂದಾ ಎ, ದಿವ್ಯಶ್ರೀ ಎಂ, ಅಮೃತಾ ಟಿ.ಎಚ್, ರಕ್ಷಿತಾ ಬಿ.ಎಂ, ಲೇಖನಾ ಅರಸ್, ಲಕ್ಷ್ಮೀ ಕೆ.ಎಸ್, ಕಾವೇರಿ ಬಿ.ಎನ್, ತರಗತಿ ಪ್ರತಿನಿಧಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಅದ್ಯಾಪಕೇತರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Key words: folkl, survival, Kannada language, Dr. PK Rajasekhar, mysore