ಬೆಳಗಾವಿ ,ಏಪ್ರಿಲ್,28,2021(www.justkannada.in) : ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಜೋರಾಗಿದ್ದು ಈ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ವಿವಾದಕ್ಕೊಳಗಾಗಿದ್ದಾರೆ.
ಹೌದು, ಕೊರೋನಾ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿರುವುದು ವೈರಲ್ ಆಗಿದೆ.
ಅಕ್ಕಿ ಕಡಿತಗೊಳಿಸಿದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಉತ್ತರಿಸಿರುವ ಆಹಾರ ಸಚಿವ ಉಮೇಶ್ ಕತ್ತಿ, ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತಿವಿ. ಲಾಕ್ ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಇದೇ ವೇಳೆ ಲಾಕ್ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ? ಎಂದು ವ್ಯಕ್ತಿ ಸಚಿವರಿಗೆ ಪ್ರಶ್ನಿಸಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಸಾಯೋದು ಒಳ್ಳೆಯದು ಎಂದು ಉಡಾಫೆಯಿಂದ ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಮಾತುಗಳನ್ನಾಡಿದ್ದಾರೆ. ಆಹಾರ ಸಚಿವರ ಈ ಆಡಿಯೋ ವೈರಲ್ ಆಗಿದೆ.
ಅದಕ್ಕಿಂತ ಬೇರೆ ಇನ್ನೇನು ಹೇಳಲಿ -ಸಚಿವ ಉಮೇಶ್ ಕತ್ತಿ ಸ್ಪಷ್ಟನೆ
ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿರುವ ಆಹಾರ ಸಚಿವ ಉಮೇಶ್ ಕತ್ತಿ, ಯೋಜನೆ ಏನು ಇದೆಯೋ ಅದನ್ನೇ ಹೇಳಿದ್ದೇನೆ. ಕರೆ ಮಾಡಿದ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ. ಅದಕ್ಕೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಅದಕ್ಕಿಂತ ಬೇರೆ ಇನ್ನೇನು ಹೇಳಲಿ. ಬೇಡ ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದಲ್ಲಿ ಊಟ ಸಿಗದೆ ಯಾರೂ ಸಾಯಬಾರದು. ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಎಂದು ಹೇಳಿದರು. ಇನ್ನು ಉಮೇಶ್ ಕತ್ತಿ ಅವರ ಬೇಜವಾಬ್ದಾರಿ ಹೇಳಿಕೆಗೆ ಎಲ್ಲೆಡೆಯಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: Food Minister- Umesh katti- answer – ration -rice -good – die