ಬೆಂಗಳೂರು:ಆ-10: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ತ ಕುಟುಂಬಗಳ ನೆರವಿಗೆ ಮುಂದಾಗಿರುವ ಆಹಾರ ಇಲಾಖೆ, ಉಚಿತವಾಗಿ ಆಹಾರ ಪದಾರ್ಥಗಳನ್ನು ಪೂರೈಸುವ ಯೋಜನೆ ರೂಪಿಸಿದೆ.
ಭಾರೀ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಈ ಕುಟುಂಬ ಗಳಿಗೆ ತಕ್ಷಣ ಆಹಾರ ಭದ್ರತೆ ಒದಗಿಸಲು ಉಚಿತವಾಗಿ ‘ವಿಶೇಷ ಆಹಾರ ಪ್ಯಾಕೆಟ್’ಗಳನ್ನು ವಿತರಿಸಲು ಆಹಾರ ಇಲಾಖೆ ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಆಗಸ್ಟ್ 8ರಂದು ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ಪ್ರವಾಹ ಪೀಡಿತ ಬೆಳಗಾವಿ, ಬಾಗಲಕೋಟೆ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಸೇರಿ 9 ಜಿಲ್ಲೆಗಳ ಸಂತ್ರಸ್ತ ಕುಟುಂಬಗಳಿಗೆ 1.50 ಲಕ್ಷ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತಿದೆ.
ವಿಶೇಷ ಆಹಾರ ಪ್ಯಾಕೆಟ್: ‘ವಿಶೇಷ ಆಹಾರ ಪ್ಯಾಕೆಟ್’ನಲ್ಲಿ ತಲಾ 10 ಕೆ.ಜಿ ಅಕ್ಕಿ, 1 ಕೆ.ಜಿ ತೊಗರಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಅಯೋಡಿನ್‌ಯುಕ್ತ ಉಪ್ಪು, 1 ಲೀಟರ್ ತಾಳೆ ಎಣ್ಣೆ (ಪಾಮ್ ಆಯಿಲ್) ಹಾಗೂ 5 ಲೀಟರ್ ಸೀಮೆ ಎಣ್ಣೆ ಇರಲಿದೆ. ಈ ಆಹಾರದ ಪ್ಯಾಕೆಟ್‌ಗಳನ್ನು ಆಯಾ ಜಿಲ್ಲೆಗಳ ಬೇಡಿಕೆಯನ್ನು ಆಧರಿಸಿ ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲಾಗುತ್ತದೆ. ಈಗಾಗಲೇ 9 ಜಿಲ್ಲೆಗಳಿಂದ ಬೇಡಿಕೆಯ ಪ್ರಸ್ತಾವನೆ ತರಿಸಿಕೊಳ್ಳಲಾಗಿದ್ದು, ಅದರಂತೆ ಬೆಳಗಾವಿ ಜಿಲ್ಲೆಯಿಂದ 50 ಸಾವಿರ, ಬಾಗಲಕೋಟೆಗೆ 15 ಸಾವಿರ, ಧಾರವಾಡ 40 ಸಾವಿರ, ಗದಗ 10 ಸಾವಿರ, ಯಾದಗಿರಿ 5 ಸಾವಿರ, ರಾಯಚೂರು 10 ಸಾವಿರ, ಕೊಡಗು 10 ಸಾವಿರ, ಉತ್ತರ ಕನ್ನಡ 5 ಸಾವಿರ, ಶಿವಮೊಗ್ಗ ಜಿಲ್ಲೆಯಿಂದ 5 ಸಾವಿರ ಸೇರಿ ಒಟ್ಟು 1.50 ಲಕ್ಷ ಆಹಾರ ಪ್ಯಾಕೆಟ್‌ಗಳನ್ನು ಕೋರಿ ಪ್ರಸ್ತಾವನೆಗಳು ಬಂದಿವೆ. ಅವುಗಳನ್ನು ಜಿಲ್ಲೆಗಳ ಹಂತದಲ್ಲಿಯೇ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಈ 9 ಜಿಲ್ಲೆಗಳಲ್ಲದೆ ಹಾಸನ, ಹಾವೇರಿ, ಉಡುಪಿ ಜಿಲ್ಲೆಗಳಿಂದಲೂ ಆಹಾರ ಪ್ಯಾಕೆಟ್‌ಗಳಿಗೆ ಪ್ರಸ್ತಾವನೆಗಳು ಬಂದಿವೆ. ಇದಲ್ಲದೇ ಬೇರೆ ಜಿಲ್ಲೆಗಳಿಂದಲೂ ಪ್ರಸ್ತಾವನೆ ಬಂದಲ್ಲಿ ಆಹಾರದ ಪ್ಯಾಕೆಟ್ ಪೂರೈಸಲು ಇಲಾಖೆ ಸಿದ್ಧವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಅಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಇದೇ ರೀತಿ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗಿತ್ತು. ಈಗ ಉತ್ತರ ಕರ್ನಾಟಕ ಸೇರಿದಂತೆ ಕರಾವಳಿ, ಮಲೆನಾಡು ಭಾಗದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಅಲ್ಲಿನ ಸಂತ್ರಸ್ತ ಕುಟುಂಬಗಳಿಗೂ ಆಹಾರ ಭದ್ರತೆ ಒದಗಿಸಲು ಇಲಾಖೆ ತೀರ್ಮಾನಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಬಂಧನೆಗಳು ಏನೇನು?
ಆಹಾರ ಪ್ಯಾಕೆಟ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಅವರು ವಾಸಿಸುವ ಗ್ರಾಮ ಪಂಚಾಯಿತಿಗಳಿಂದ ಮತ್ತು ನಗರ ಪ್ರದೇಶಗಳಿದ್ದಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಗೆ ಜಿಲ್ಲಾಧಿಕಾರಿಗಳು ಅನುಮೋ ದಿಸುವ ಕೋರಿಕೆಯಂತೆ ವಿತರಿಸಬೇಕು.
ಜಿಲ್ಲಾವಾರು ನಿಗದಿಪಡಿಸಲಾಗಿರುವ ಪ್ಯಾಕೆಟ್‌ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ವಿತರಿಸಬೇಕು.
ವಿಶೇಷ ಆಹಾರ ಪ್ಯಾಕೆಟ್‌ಗಳನ್ನು ಸಿದ್ಧಪಡಿಸಲು ಅಗತ್ಯ ಸಾಮಗ್ರಿಗಳ ಸಂಗ್ರಹಣೆ, ಪ್ಯಾಕಿಂಗ್ ವ್ಯವಸ್ಥೆ, ಸಾಗಣೆ ಇತ್ಯಾದಿ ಎಲ್ಲ ಜವಾಬ್ದಾರಿಗಳನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.
ವಿಶೇಷ ಆಹಾರ ಪ್ಯಾಕೆಟ್‌ಗಳಿಗೆ ಬೇಕಾಗುವ ಅಕ್ಕಿಗೆ ಇಲಾಖೆಯ ಆಯುಕ್ತರಿಗೆ ಬೇಡಿಕೆ ಸಲ್ಲಿಸಿ ಭಾರತೀಯ ಆಹಾರ ನಿಗಮದ ‘ಮುಕ್ತ ಮಾರುಕಟ್ಟೆ ಬೆಂಬಲ ವ್ಯವಸ್ಥೆ’ ದರದಲ್ಲಿ ಹಂಚಿಕೆ ಪಡೆದುಕೊಳ್ಳಬೇಕು.
ಸೀಮೆ ಎಣ್ಣೆಗೆ ತೈಲ ಕಂಪನಿಗಳ ಸಹಾಯಧನ ರಹಿತ ದರದಲ್ಲಿ ಪಡೆದುಕೊಳ್ಳಬೇಕು.
ಬೇಳೆ, ತಾಳೆ ಎಣ್ಣೆ, ಉಪ್ಪು, ಸಕ್ಕರೆಯನ್ನು ಜಿಲ್ಲಾಧಿಕಾರಿಗಳು ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕು.
ಈ ಯೋಜನೆಗೆ ತಗಲುವ ವೆಚ್ಚವನ್ನು ಪ್ರಕೃತಿ ವಿಕೋಪ ನಿಧಿಯಿಂದ ಭರಿಸಬೇಕು.
ಜಿಲ್ಲೆಗಳಿಗೆ ನಿಗದಿಪಡಿಸಿರುವ ಪ್ಯಾಕೆಟ್ಗಿಂತ ಹೆಚ್ಚು ಕಿಟ್‌ಗಳು ಬೇಕಾದಲ್ಲಿ ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು
ಉಚಿತ ಆಹಾರ ಪ್ಯಾಕೆಟ್ ವಿತರಿಸಲು ಆಹಾರ ಇಲಾಖೆ ತೀರ್ಮಾನ
9 ಜಿಲ್ಲೆಗಳಿಂದ 1.50 ಲಕ್ಷ ಪ್ಯಾಕೆಟ್‌ಗಳಿಗೆ ಕೋರಿಕೆ; ಹಾಸನ, ಹಾವೇರಿ, ಉಡುಪಿ ಜಿಲ್ಲೆಗಳಿಂದಲೂ ಪ್ರಸ್ತಾವನೆ ಸಲ್ಲಿಕೆ
ಪ್ರವಾಹ ಪೀಡಿತ ಜಿಲ್ಲೆಗಳ ಸಂತ್ರಸ್ತ ಕುಟುಂಬಗಳಿಗೆ ಉಚಿತವಾಗಿ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಕಿಟ್‌ಗಳನ್ನು ತಕ್ಷಣ ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರು ಪುನರ್ವಸತಿ ಕೇಂದ್ರ, ಗಂಜಿ ಕೇಂದ್ರಗಳಿಂದ ತಮ್ಮ ಖಾಯಂ ವಾಸದ ಸ್ಥಳಗಳಿಗೆ ಮರಳಿದಾಗ ಆಹಾರ ಪದಾರ್ಥದ ತುರ್ತು ಅಗತ್ಯವಿರುತ್ತದೆ. ಆಗ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತದೆ.
– ಬಿ.ಎಚ್. ಅನಿಲ್‌ಕುಮಾರ್ ಆಹಾರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ
ಕೃಪೆ:ಉದಯವಾಣಿ