ನಿಷೇಧ ಚಿಂತನೆ: ಮಧ್ಯಮ ವರ್ಗಕ್ಕೆ ಬರೆ!

ಬೆಂಗಳೂರು:ಜೂ-1: “ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಯೋಜನೆಗಳಿಗೆ ಮುಂದಿನ ಐದು ವರ್ಷಗಳ ನಿಷೇಧ’ ದ ಚಿಂತನೆ ಪರೋಕ್ಷವಾಗಿ ಮಧ್ಯಮ ವರ್ಗದ ಮೇಲೆ ಬರೆ ಎಳೆಯಲಿದ್ದು, ಫ್ಲ್ಯಾಟ್‌ ಅಥವಾ ಮನೆಗಳ ಬಾಡಿಗೆ ಗಗನಕ್ಕೇರುವ ಸಾಧ್ಯತೆ ಇದೆ.

ನಗರದಲ್ಲಿರುವ ಬಹುತೇಕ ಮಧ್ಯಮ ವರ್ಗ ಬಾಡಿಗೆ ಮನೆಗಳಲ್ಲೇ ಇದೆ. ಹಾಗೊಂದು ವೇಳೆ ಹೊಸ ಅಪಾರ್ಟ್‌ಮೆಂಟ್‌ಗಳನ್ನು ನಿಷೇಧಿಸಿದರೆ, ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಳವಾಗಲಿದೆ. ಮತ್ತೂಂದೆಡೆ ವಲಸೆ ಬರುವ ಜನರ ಪ್ರಮಾಣ ಏರಿಕೆ ಆಗುತ್ತಲೇ ಹೋಗುತ್ತದೆ. ಇದರಿಂದ ಲಭ್ಯವಿರುವ ಮನೆಗಳ ಬಾಡಿಗೆ ಹೆಚ್ಚಳ ಆಗಲಿದ್ದು, ಅದು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವೆಲಪರ್ ಸಂಘಗಳ ಒಕ್ಕೂಟ (ಕ್ರಡಾಯ್‌) ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಪ್ರತಿ ವರ್ಷ ಮನೆಗಳ ಬಾಡಿಗೆ ಶೇ. 6ರಿಂದ 7ರಷ್ಟು ಏರಿಕೆ ಆಗಲಿದೆ. ಸರ್ಕಾರದ ಹೊಸ ಚಿಂತನೆ ಅನುಷ್ಠಾನಗೊಂಡರೆ, ಸಹಜವಾಗಿಯೇ ಬಾಡಿಗೆ ಪ್ರಮಾಣ ದುಪ್ಪಟ್ಟಾಗಲಿದೆ. ಇದಕ್ಕೆ ಮಧ್ಯಮ ವರ್ಗವೇ ಗುರಿಯಾಗಲಿದೆ ಎಂದು ಕ್ರಡಾಯ್‌ ಬೆಂಗಳೂರು ನಗರದ ಚೇರ್‌ಮನ್‌ ಸುರೇಶ್‌ ಹರಿ ಅಭಿಪ್ರಾಯಪಡುತ್ತಾರೆ.

1.31 ಲಕ್ಷ ಬಾಡಿಗೆ ಮನೆಯಲ್ಲಿ ವಾಸ: ನಗರದಲ್ಲಿ 2011ರ ಜನಗಣತಿ ಪ್ರಕಾರವೇ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸಂಖ್ಯೆ 1.31 ಲಕ್ಷ. ಅದೇ ರೀತಿ, ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ, ನಗರೀಕರಣದ ಪ್ರಮಾಣ ಶೇ. 91ರಷ್ಟಿದೆ ಎಂದು 2018-19ನೇ ಸಾಲಿನ ರಾಜ್ಯ ಆರ್ಥಿಕ ಸಮೀಕ್ಷೆ ಉಲ್ಲೇಖೀಸಿದೆ. ಇದರಲ್ಲಿ ಶೇ. 30ರಿಂದ 40ರಷ್ಟು ಜನರಿಗಾದರೂ ಇದರ ಬಿಸಿ ತಟ್ಟಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಚಿಂತನೆ ಆ ವರ್ಗದ ನಿದ್ದೆಗೆಡಿಸಿದೆ. ಅಲ್ಲದೆ, ಉತ್ತರ ಕರ್ನಾಟಕ, ಕರಾವಳಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ಕೆಲಸ ಅರಸಿ ಬರುತ್ತಾರೆ. ಅದಕ್ಕೂ ಈಗ ಬ್ರೇಕ್‌ ಬೀಳುವ ಸಾಧ್ಯತೆ ಇದೆ.

ಬೆಂಗಳೂರು ಇಂದು ದೇಶದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಒಳಗೊಂಡ ನಗರವಾಗಿದೆ. ಮೊದಲೆರಡು ಸ್ಥಾನಗಳು ಕ್ರಮವಾಗಿ ಮುಂಬೈ ಮತ್ತು ದೆಹಲಿ ಆಗಿವೆ. ಇದಕ್ಕೆ ಪೂರಕವಾಗಿ ಮನೆಗಳಿಗೆ ಅತಿ ಹೆಚ್ಚು ಬೇಡಿಕೆ ಇರುವ ದೇಶದ ಎರಡನೇ ನಗರವೂ ಇದಾಗಿದೆ. ಇದನ್ನು ಮನಗಂಡು ಸರ್ಕಾರವು 2022ರ ವೇಳೆಗೆ ಎಲ್ಲರಿಗೂ ಸೂರು ಕಲ್ಪಿಸುವ ದೂರದೃಷ್ಟಿ ಒಳಗೊಂಡಿದೆ.

ಈ ಮಧ್ಯೆ ಮತ್ತೂಂದೆಡೆ ಸರ್ಕಾರವೇ ವಸತಿ ಸಮುತ್ಛಯಗಳಿಗೆ ನಿರ್ಬಂಧ ವಿಧಿಸುತ್ತಿದೆ. ಅಂದರೆ ಒಂದಕ್ಕೊಂದು ತದ್ವಿರುದ್ಧವಾಗಿದೆ. ಉದ್ಯಮದ ಬೆಳವಣಿಗೆಗೂ ಇದು ದೊಡ್ಡ ಪೆಟ್ಟು ಕೊಡುವುದರ ಜತೆಗೆ ವಾಸಯೋಗ್ಯವಲ್ಲದ ವಾತಾವರಣ ಸೃಷ್ಟಿಯಾಗಲಿದೆ ಎಂದು ಕ್ರಡಾಯ್‌ ಬೆಂಗಳೂರು ನಗರದ ಚುನಾಯಿತ ಅಧ್ಯಕ್ಷ ಭಾಸ್ಕರ್‌ ಟಿ. ನಾಗೇಂದ್ರಪ್ಪ ತಿಳಿಸುತ್ತಾರೆ.

ವಾರ್ಷಿಕ 8 ಸಾವಿರ ಅಪಾರ್ಟ್‌ಮೆಂಟ್‌ಗಳು?: ಬಿಲ್ಡರ್‌ಗಳಲ್ಲೂ ಸಂಘಟಿತ ಮತ್ತು ಅಸಂಘಟಿತ ಎಂಬ ವರ್ಗ ಇದೆ. ಕ್ರಡಾಯ್‌ ಅಡಿ ವಾರ್ಷಿಕ ಅಂದಾಜು ನಾಲ್ಕು ಸಾವಿರ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾದರೆ, ಕ್ರಡಾಯ್‌ದಿಂದ ಹೊರತಾದ ಅಪಾರ್ಟ್‌ಮೆಂಟ್‌ಗಳೂ ಹೆಚ್ಚು-ಕಡಿಮೆ ಇಷ್ಟೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಅಂದರೆ ಕರ್ನಾಟಕದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಬಂದ ನಂತರ ಈ ಅಸಂಘಟಿತ ಬಿಲ್ಡರ್‌ಗಳಿಂದ ನಿರ್ಮಿಸಲಾಗುವ ಅಪಾರ್ಟ್‌ಮೆಂಟ್‌ಗಳ ಪ್ರಮಾಣ ಕಡಿಮೆ ಆಗಿದೆ ಎಂದೂ ಭಾಸ್ಕರ್‌ ಟಿ. ನಾಗೇಂದ್ರಪ್ಪ ಮಾಹಿತಿ ನೀಡಿದರು.

ಇನ್ನು ಅಂತರ್ಜಾಲ ತಾಣದಲ್ಲಿನ ಮಾಹಿತಿ ಪ್ರಕಾರ, ಈವರೆಗೆ 106 ಹೊಸ ಅಪಾರ್ಟ್‌ಮೆಂಟ್‌ ಯೋಜನೆಗಳು ಕಾರ್ಯಾರಂಭಮಾಡಿವೆ. ಈ ಯೋಜನೆಗಳಲ್ಲಿ 18,600 ಹೊಸ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಬಿಲ್ಡರ್ಗಳ ಲಾಬಿ?: ಸಾವಿರಾರು ಅಪಾರ್ಟ್‌ಮೆಂಟ್‌ಗಳಲ್ಲಿ ಲಕ್ಷಾಂತರ ಫ್ಲ್ಯಾಟ್‌ಗಳು ಖಾಲಿ ಇವೆ. ಅವುಗಳ ಮಾರಾಟಕ್ಕಾಗಿ ಬಿಲ್ಡರ್‌ಗಳು ಈ ನಿಟ್ಟಿನಲ್ಲಿ ಲಾಬಿ ಮಾಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ವರ್ಷಗಟ್ಟಲೆ ಖಾಲಿ ಇದ್ದರೂ ಈ ಫ್ಲ್ಯಾಟ್‌ಗಳನ್ನು ಕೆಲವರು ತಮ್ಮ ನಿರೀಕ್ಷೆಗೆ ತಕ್ಕಂತೆ ಬೆಲೆ ಬರುವವರೆಗೆ ಮಾರಾಟ ಮಾಡುತ್ತಿಲ್ಲ. ಹೊಸ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಮೇಲೆ ನಿಷೇಧದ ಚಿಂತನೆ ಬೆನ್ನಲ್ಲೇ ಈಗಿರುವ ಫ್ಲ್ಯಾಟ್‌ಗಳಿಗೆ ಬೇಡಿಕೆ ಜತೆಗೆ ಹೆಚ್ಚಿನ ಬೆಲೆ ಬರಲಿದೆ.

ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ತಂತ್ರ ಅನುಸರಿಸಿದ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ನಿವೇಶನಗಳು ಮತ್ತು ಪ್ರತ್ಯೇಕ ಮನೆಗಳಿಗೆ ಬೇಡಿಕೆ ಬರುವ ಸಾದ್ಯತೆಯೂ ಇದೆ. ಫ್ಲ್ಯಾಟ್‌ಗಳ ಬೆಲೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಕೊನೆಪಕ್ಷ ನಿವೇಶನ ಅಥವಾ ಪ್ರತ್ಯೇಕ ಮನೆಗಳ ಖರೀದಿಯತ್ತ ಜನ ಮುಖಮಾಡಬಹುದು ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಕೃಪೆ:ಉದಯವಾಣಿ

ನಿಷೇಧ ಚಿಂತನೆ: ಮಧ್ಯಮ ವರ್ಗಕ್ಕೆ ಬರೆ!

forbidden-thinking-write-for-the-middle-class