ಮೈಸೂರು,ಡಿಸೆಂಬರ್,3,2020(www.justkannada.in): ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಯಡಿಯೂರಪ್ಪ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ ರಾಜ್ಯದ ಜನತೆಗೆ ಕನಕದಾಸ ಜಯಂತಿಯ ಶುಭಾಶಯ ಕೋರಿದರು. ನಂತರ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ರಾಜ್ಯ ಸರ್ಕಾರ ಇದುವರೆಗೂ ಟೇಕ್ ಆಫ್ ಆಗಿಯೇ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ನಾವು ಸಂವಿಧಾನದ ತತ್ವದ ಮೇಲೆ ಗೌರವ ಇಟ್ಟುಕೊಂಡಿದ್ದೇವೆ. ಬಹುತ್ವದ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಆದರೆ ಬಿಜೆಪಿಯವರಿಗೆ ಸಂವಿಧಾನದ ತತ್ವದ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಸಂವಿಧಾನದ ರೀತಿ ಅವರು ನಡೆಯುವುದಿಲ್ಲ ಎಂದು ಕಿಡಿಕಾರಿದರು.
ಸಂವಿಧಾನ ಬದ್ಧವಾಗಿ ನಿಗಮ ಮಂಡಳಿ ರಚನೆಯಾಗಿಲ್ಲ..
ಇದೇ ವೇಳೆ ಸರ್ಕಾರದಿಂದ ನಿಗಮ ಮಂಡಳಿ ರಚನೆ ಅನುದಾನ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಿಗಮ ಮಂಡಳಿಗಳ ರಚನೆ ಸಂವಿಧಾನ ಬದ್ಧವಾಗಿಲ್ಲ. ಓಲೈಕೆ ರಾಜಕಾರಣಕ್ಕಾಗಿ ನಿಗಮ ಮಂಡಳಿಗಳನ್ನ ರಚನೆ ಮಾಡಿದ್ದಾರೆ ಎಂದು ಕುಟುಕಿದರು.
ಮುಸ್ಲೀಂರಿಗೆ ಟಿಕೆಟ್ ನೀಡಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮುಸ್ಲೀಂರಿಗೆ ಟಿಕೆಟ್ ನೀಡಲ್ಲ ಅಂತಾರೆ . ಇವರಿಗೆ ಸಂವಿಧಾನದ ಮೇಲೆ ಗೌರವ ಇದೆಯಾ..? ಎಂದು ಪ್ರಶ್ನಿಸಿದರು. ಸಂವಿಧಾನವನ್ನ ಸುಡಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನ ಖಂಡಿಸಿದ್ರಾ..? ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹೊಸಪಕ್ಷ ಘೋಷಣೆ ವಿಚಾರ: ರಜಿನಿಕಾಂತ್ ಗೆ ಶುಭ ಹಾರೈಸಿದ ಸಿದ್ಧರಾಮಯ್ಯ…
ಡಿಸೆಂಬರ್ 31 ರಂದು ಹೊಸ ಪಕ್ಷ ಘೋಷಣೆ ಮಾಡುವುದಾಗಿ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಶುಭಹಾರೈಸಿದರು. ರಜಿನಿಕಾಂತ್ ಅವರ ಭವಿಷ್ಯ ಉಜ್ವಲವಾಗಲಿ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
Key words: Formation – corporation board-state government – not taken off-Former CM -Siddaramaiah