ಮೈಸೂರು, ಅಕ್ಟೋಬರ್ 15, 2023(www.justkannada.in): ಮೈಸೂರಿನ ಜನರು ಶಾಂತಿ ಪ್ರಿಯರು. ಕಾನೂನು ಸುವ್ಯವಸ್ಥೆಯನ್ನ ಗೌರವಿಸುವಂತಹ ಜನ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಆಚರಣೆ ಮಾಡಲಿಕ್ಕೆ ಅವಕಾಶವಿದೆ. ಜನರ ಆಚಾರ ವಿಚಾರಗಳನ್ನ ಗೌರವಿಸಲಿಕ್ಕಾಗಿಯೇ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಮಾಡಲಿಕ್ಕೆ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಚಾಮುಂಡಿಬೆಟ್ಟದಲ್ಲಿ ನಡೆದ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಿಕ್ಕೆ ತೀರ್ಮಾನ ಮಾಡಿತ್ತು. ಆದರೆ ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೇವೆ ಎಂದರು.
ಕಲೆ ಸಾಹಿತ್ಯ ಎಲ್ಲದಕ್ಕೂ ಹೆಚ್ಚಿನ ಒತ್ತು ನೀಡಿದ್ದೇವೆ. ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಿದ್ದ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ನಮ್ಮ ಕನ್ನಡ ಸಂಸ್ಕತಿಯನ್ನು ಬಿಂಬಿಸುವ ಆಚರಣೆ ದಸರಾ. ಭೂಮಿಯನ್ನು ಭಾಷೆಯನ್ನು ತಾಯಿಯ ಹೆಸರಿನಲ್ಲಿ ಕರೆಯುತ್ತೇವೆ. ನಮ್ಮ ನಾಡಿನ ಅಗ್ರ ದೇವತೆ ಚಾಮುಂಡಿತಾಯಿ. ಪ್ರಯತ್ನ ಮಾಡಿ ಸೋಲಬಹುದು ಆದರೆ ಪ್ರಾರ್ಥಿಸಿ ಸೋತಿಲ್ಲ ಎಂಬ ನಂಬಿಕೆ ಇಟ್ಟು ನಾಡಿಗೆ ಒಳ್ಳೆ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲು ಇಲ್ಲಿ ಬಂದಿದ್ದೇವೆ ಎಂದರು.
ನಾವು ಚುನಾವಣೆಗೆ ಮುಂಚೆ ನಾನು ಮತ್ತು ಮಾನ್ಯ ಮುಖ್ಯಮಂತ್ರಿಗಳು ತಾಯಿ ಚಾಮುಂಡಿ ದೇವಿಗೆ 5 ಗ್ಯಾರೆಂಟಿ ಗಳನ್ನು ಜಾರಿಗೆ ತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಅದರಂತೆ ನಾವು ನುಡಿದಂತೆ ನಡೆದು 4 ಗ್ಯಾರೆಂಟಿ ಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ತಾಯಿ ಚಾಮುಂಡೇಶ್ವರಿ ಮಳೆಗೆ ಆಶೀರ್ವಾದ ಮಾಡಲಿ: ಶಾಸಕ ಜಿ.ಟಿ.ದೇವೇಗೌಡ
ದುರ್ಗೆಯರ ಶಕ್ತಿಹೊಂದಿರುವ ನಾಡದೇವತೆ ಚಾಮುಂಡೇಶ್ವರಿ. ಇಂದು ಎಲ್ಲರೂ ಭಕ್ತಯಿಂದ ಪೂಜಾ ಕೆಲಸವನ್ನ ನೆರವೇರಿಸಿದ್ದೇವೆ. ಕನ್ನಡ ನಾಡಿಗೆ ಬೀಕರ ಬರಗಾಲ ಬಂದಿದೆ. ತಾಯಿ ಚಾಮುಂಡೇಶ್ವರಿ ಮಳೆಗೆ ಆಶೀರ್ವಾದ ಮಾಡಬೇಕು. ನಮ್ಮಲ್ಲೂ ರಾಕ್ಷಸ ಗುಣಗಳಿವೆ, ಈ ರಾಕ್ಷಸ ಗುಣಗಳನ್ನ ಬಿಟ್ಟು ಎಲ್ಲರೂ ಮುಂದೆ ಸಾಗಬೇಕು. ಎಲ್ಲರೂ ದ್ವೇಷ, ಅಸೂಯೆ ಬಿಟ್ಟು ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರಿನ ದಸರಾ ವೀಕ್ಷಣೆಗೆ ಹಲವು ಕಡೆಯಿಂದ ಜನ ಬರ್ತಾರೆ. ಈ ಅದ್ದೂರಿ ವೈಭೋಗವನ್ನ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಇರೋದ್ರಿಂದ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆ ಇದೆ. ತಾಯಿ ಚಾಮುಂಡೇಶ್ವರಿ ಆಶಿರ್ವಾದದಿಂದ ರಾಜ್ಯದಲ್ಲಿ ಮಳೆ ಆಗಲಿ. ಎಲ್ಲರಿಗೂ ಚಾಮುಂಡೇಶ್ವರಿ ಒಳ್ಖೆಯದನ್ನ ಮಾಡಲಿ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ, ಇಂಧನ ಇಲಾಖೆಯ ಸಚಿವರಾದ ಕೆ ಜೆ ಜಾರ್ಜ್, ಹಿಂದುಳಿದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಕೊಡಗು ಮೈಸೂರು ಲೋಕಸಭಾ ಸಂಸದರಾದ ಪ್ರತಾಪ್ ಸಿಂಹ ಮೈಸೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಕುಮಾರ್, ಶ್ರೀವತ್ಸ, ಜಿ ಡಿ ಹರೀಶ್ ಗೌಡ, ಡಿ ರವಿಶಂಕರ್, ಹರೀಶ್ ಗೌಡ, ದರ್ಶನ್ ದ್ರುವ ನಾರಾಯಣ್ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ ತಿಮ್ಮಯ್ಯ, ಉಪ ಮಹಾ ಪೌರರಾದ ಡಾ ರೂಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.