ಬೆಂಗಳೂರು,ನವೆಂಬರ್,14,2024 (www.justkannada.in): ಕೋವಿಡ್ ಹಗರಣದ ತನಿಖೆಗೆ ಎಸ್ ಐಟಿ ರಚನೆ ಮಾಡಲಾಗುವುದು. ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಐಜಿ ಲೆವೆಲ್ ಅಧಿಕಾರಿ ನೇತೃತ್ವದಲ್ಲಿ ಎಸ್ ಐಟಿ ರಚನೆಯಾಗಲಿದೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು ಸಭೆ ನಂತರ ಕಾನೂನು ಸಚಿವ ಹೆಚ್. ಕೆ.ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸಚಿವ ಸಂಪುಟ ಸಭೆಯಲ್ಲಿ 25 ವಿಷಯಗಳನ್ನ ಪರಿಶೀಲಿಸಿದ್ದೇವೆ. ಎರಡು ಮೂರು ಬಿಟ್ಟು ಉಳಿದ ವಿಷಯಗಳಿಗೆ ಅನುಮತಿ ನೀಡಲಾಗಿದೆ. ಎಲ್ಲಾ ಸಮಿತಿಗಳನ್ನ ನಿಷ್ಕ್ರಿಯಗೊಳಿಸಿತ್ತು. ಹಿಂದಿನ ಬಿಜೆಪಿ ಸರ್ಕಾರ ಯಾರ ಗಮನಕ್ಕೂ ಬರದಂತೆ ಭ್ರಷ್ಟಾಚಾರ ಮಾಡಿತ್ತು. 200, 300 ರೂ. ಪಿಪಿಎ ಕಿಟ್ ಗೆ 2100 ರೂ. ಕೊಟ್ಟಿದೆ. ಲಕ್ಷಾಂತರ ಕಿಟ್ ಬೇರೆ ದೇಶದಿಂದ ತರಿಸಿದೆ. ಔಷಧಿಗಳನ್ನ ಎರಡು ಪಟ್ಟು ಹೆಚ್ಚು ದರದಲ್ಲಿ ಖರೀದಿ ಮಾಡಿದೆ. ಬ್ಲಾಕ್ ಲೀಸ್ಟ್ ನಲ್ಲಿದ್ದ ಕಂಪನಿಗಳಿಗೆ ಪೇಮೆಂಟ್ ಮಾಡಿದ್ದು. ಪಿಎಸಿ ಸಭೆಗಳಲ್ಲಿ ಚರ್ಚೆಯಾದ್ರೂ ಕ್ರಮ ಜರುಗಿಸದಿರುವುದು. ಈ ಬಗ್ಗೆ ಮಾನವಹಕ್ಕುಗಳಿಗೂ ದೂರುಗಳು ಹೋಗಿದ್ದವು. ಹೀಗಾಗಿ ಕುನ್ಹಾ ಕಮಿಟಿಯನ್ನ ರಚಿಸಿದ್ದವು ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.
ಜಗತ್ತು ಕೊರೊನಾದಿಂದ ಅಲ್ಲೋಲ ಕಲ್ಲೋಲ ಆಗಿತ್ತು. ದೊಡ್ಡ ದುರಂತವನ್ನ ಜಗತ್ತು ಅನುಭವಿಸಿತ್ತು. ದೇಶ ನಮ್ಮ ರಾಜ್ಯವೂ ದುರಂತ ಅನುಭವಿತ್ತು. ಆ ವೇಳೆ ಆಗಿನ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ ಭ್ರಷ್ಟಾಚಾರ, ಬೇಜವಾಬ್ದಾರಿ, ಮೋಸ ಮಾಡಿದೆ. ಮಾಹಿತಿಗಳನ್ನಅದುಮಿಟ್ಟುಕೊಳ್ಳುವುದು. ಕಾನೂನುಗಳನ್ನ ಸಿಗದಂತೆ ಮಾಡುವುದು. ಎಲ್ಲವನ್ನು ಆ ಸಂದರ್ಭದಲ್ಲಿ ಮಾಡಿದೆ ಎಂದರು.
50 ಸಾವಿರ ಕಡತಗಳನ್ನ ಕಮೀಷನ್ ಪರಿಶೀಲಿಸಿದೆ. ಮಧ್ಯಂತರ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗಿತ್ತು. ಡಿಸಿಎಂ ಇದರ ಅಧ್ಯಕ್ಷರಾಗಿದ್ದರು. ನಾನು ಆ ಕಮಿಟಿಯ ಸದಸ್ಯನಾಗಿದ್ದೇನೆ. ಸಬ್ ಕಮಿಟಿಯ ಚರ್ಚೆಯ ವಿಷಯ ಇಂದು ಚರ್ಚೆಯಾಗಿದೆ. ಅಲ್ಲಿ ಕಂಡು ಬಂದ ಭ್ರಷ್ಟಾಚಾರ ನಡುಕ ಹುಟ್ಟಿಸಿವೆ. ಸರ್ಕಾರ ನಡೆದುಕೊಂಡ ರೀತಿ, ಅಂದಿನ ಸಿಎಂ, ಸಚಿವರು, ಅಧಿಕಾರಿಗಳು ನಡೆದುಕೊಂಡ ರೀತಿ ಎಲ್ಲವೂ ವರದಿಯಲ್ಲಿ ಬಹಿರಂಗವಾಗಿವೆ ಹೀಗಾಗಿ ಎಸ್ ಐಟಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಪಿಪಿಎ ಕಿಟ್ ಸಿಂಗಾಪುರದಲ್ಲಿ ಖರೀದಿಸಿದ್ದು ಯಾಕೆ? ನಾವು ಅಲ್ಲಿಗೆ ಹೋಗಿ ಪರಿಶೀಲಿಸಬೇಕಿಲ್ಲ. ಇಲ್ಲಿ ಕುಳಿತೇ ಅದರ ಮಾಹಿತಿ ಪಡೆಯಬಹುದು. ಬೇಸಿಕ್ ಲೆವೆಲ್ ನಲ್ಲಿ ತನಿಖೆ ಅಗತ್ಯವಿದೆ. ಹಾಗಾಗಿ ಎಸ್ ಐಟಿ ರಚನೆಗೆ ಕೊಟ್ಟಿದ್ದೇವೆ. ಡೆತ್ ಆಡಿಟ್ ನಲ್ಲೂ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಪಬ್ಲಿಕ್ ಅಕೌಂಟ್ ಕಮಿಟಿ ಇದನ್ನ ಎತ್ತಿಹಿಡಿದಿತ್ತು ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.
10 ಗಣಿ ಕಂಪನಿಗಳವಿರುದ್ಧ ತನಿಖೆಗೆ ನಿರ್ಣಯ
ಅಕ್ರಮ ಗಣಿಗಾರಿಕೆ ವಿಚಾರ ಸಂಬಂಧ 10 ಗಣಿ ಕಂಪನಿಗಳವಿರುದ್ಧ ತನಿಖೆಗೆ ನಿರ್ಣಯ ಮಾಡಲಾಗಿದೆ. ಲೋಕಾಯುಕ್ತ ಎಸ್ ಐಟಿ ತನಿಖೆಗೆ ವಹಿಸಲು ನಿರ್ಧಾರ ಮಾಡಲಾಗಿದೆ. ಮೈಸೂರು ಮ್ಯಾಂಗನೀಸ್ ಗಣಿ ಗುತ್ತಿಗೆ, ದಶರಥ ರಾಮಿರೆಡ್ಡಿ ಗಣಿ ಗುತ್ತಿಗೆ ಸೇರಿ 10 ಕಂಪನಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆಗೆ ನಿರ್ಣಯಿಸಲಾಗಿದೆ ಎಂದರು.
10 ಕಂಪನಿಗಳ ಹೆಸರು ಈ ಕೆಳಕಂಡಂತಿದೆ..
ಮೈಸೂರು ಮ್ಯಾಂಗನೀಸ್ ಕಂಪನಿ( ಚಿತ್ರದುರ್ಗ)
ದಶರಥ್ ರಾಮೀರೆಡ್ಡಿ ಕಂಪನಿ( ಚಿತ್ರದುರ್ಗ)
ಅಲ್ಲಂ ವೀರಭದ್ರಪ್ಪ ಗಣಿ ಕಂಪನಿ( ಚಿತ್ರದುರ್ಗ)
ಕರ್ನಾಟಕ ಲಿಂಪೋ ಕಂಪನಿ( ತುಮಕೂರು)
ಅಂಜನಾ ಮಿನರಲ್ಸ್ ಕಂಪನಿ( ಚಿತ್ರದುರ್ಗ)
ರಾಜಯ್ಯ ಕಾನುಮ್ ಕಂಪನಿ( ಚಿತ್ರದುರ್ಗ)
ಮಹಾಲಕ್ಷ್ಮಿ ಆಂಡ್ ಕೋಂ ( ತುಮಕೂರು)
ಎಂ.ಶ್ರೀನಿವಾಸುಲು ಕಂಪನಿ( ಚಿತ್ರದುರ್ಗ)
ಲಕ್ಷ್ಮಿ ನರಸಿಂಹ ಮೈನಿಂಗ್ ಕಂಪನಿ( ಚಿತ್ರದುರ್ಗ)
ಜಿ ರಾಜಶೇಖರ್ ಮಾಲಿಕತ್ವದ ಕಂಪನಿ( ತುಮಕೂರು)
ಈ ಕಂಪನಿಗಳ ವಿರುದ್ಧ ತನಿಖೆಗೆ ಆದೇಶ
ಉಡುಪಿ, ದಾವಣಗೆರೆಯಲ್ಲಿ 50 ಹಾಸಿಗೆ ಘಟಕ ನಿರ್ಮಿಸಲು ತೀರ್ಮಾನಿಸಲಾಗಿದೆ. ತೀವ್ರ ನಿಗಾ ಘಟಕ ನಿರ್ಮಾಣಕ್ಕೆ ಅನುಮತಿ. 39.37 ಕೋಟಿ ರೂ. ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ, 125 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
Key words: Formation, SIT, Covid scam, Cabinet, meeting